ವೈ ಜಿ ಅಶೋಕ್ ಕುಮಾರ್ .ಹಿರಿಯ ಪತ್ರಕರ್ತರು
1967, ಮಾರ್ಚ್ 29, ಭಾರತದ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ಪಾರ್ಲಿಮೆಂಟ್ ನಲ್ಲಿ ಕನ್ನಡದ ಕಂಚಿನ ಕಂಠವೊಂದು ಮೊಳಗಿತು.ಅಂದು ಲೋಕಸಭೆಯ ಸ್ಪೀಕರ್ ನೀಲಂ ಸಂಜೀವರೆಡ್ಡಿಯವರು ಮುಖದಲ್ಲಿ ಯಾವುದೇ ಗಾಬರಿ ವ್ಯಕ್ತಪಡಿಸದಿದ್ದರೂ ಸಂಸದೀಯ ನಡವಳಿಕೆಯ ಪುಸ್ತಕದಲ್ಲಿ ಮುಖ ಹುದುಗಿಸಿ ಕುಳಿತಿದ್ದರು.ನಂತರ ತಮ್ಮ ರೂಲಿಂಗ್ ನೀಡಿದರು.
ಪ್ರಧಾನಿ ಇಂದಿರಾಗಾಂಧಿಯವರು ಅಧಿಕಾರಿಗಳು ಗುರುತು ಹಾಕಿ ಕೊಟ್ಟ ಸಾಲನ್ನು ಓದಿಕೊಂಡು ‘ತಮ್ಮ ಮಾತೃಭಾಷೆಯಲ್ಲಿ ಮಾತನಾಡುವ ಅವರ ಹಕ್ಕನ್ನು ನಾನು ಪ್ರಶ್ನೆ ಮಾಡಲಾಗದು’ ಎಂದರು.ಅವತ್ತು ಹದಿನೇಳು ವರ್ಷಗಳ ಸಂಸತ್ತಿನಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯ ಹಕ್ಕನ್ನು ಕನ್ನಡದ ನುಡಿಯ ಮೂಲಕ ದಾಖಿಲಿಸಿದವರು ನಮ್ಮ ಪ್ರೀತಿಯ ನಾಯಕ ಜಯದೇವಪ್ಪ ಹಾಲಪ್ಪ ಪಟೇಲ್.
ಸಮಾಜವಾದಿ ಪಕ್ಷದ ಹುರಿಯಾಳಾಗಿ ಶಿವಮೊಗ್ಗ ಲೋಕಸಭೆಯನ್ನು ಪ್ರತಿನಿಧಿಸಿದ್ದ ಜೆ ಹೆಚ್ ಪಟೇಲ್. 1978, ಕರ್ನಾಟಕ ವಿಧಾನ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಟೇಲರು ಆರ್ಥಿಕ ಸ್ಥಿತಿ ಮತ್ತು ಅದರ ಗತಿಯ ಕುರಿತು ಮಾತನಾಡುತ್ತಾ ದೇಶದ ಆರ್ಥಿ ಕ ಸ್ಥಿತಿ,ಕರ್ನಾಟಕದ ಪರಿಸ್ಥಿತಿ, ಪಂಜಾಬ್ ರಾಜ್ಯದಲ್ಲಿ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳನ್ನು ನಿಖರ ಅಂಕಿ ಅಂಶಗಳ ಮೂಲಕ ಗಂಟೆಗಳ ಕಾಲ ಅಮೋಘ ಭಾಷಣ ಮಾಡಿದರು.
ಮಧ್ಯಾಹ್ನದ ಭೋಜನ ವೇಳೆಯಲ್ಲಿ ವಿರೋಧಪಕ್ಷದ ಮೊಗಸಾಲೆಗೆ ಬಂದ ಮುಖ್ಯಮಂತ್ರಿ ದೇವರಾಜ ಅರಸರು ಪಟೇಲರನ್ನು ಅಭಿನಂದಿಸಿ ಅವರ ಭಾಷಣದಲ್ಲಿದ್ದ ಅಂಕಿ ಅಂಶಗಳ ನಕಲನ್ನು ಕೇಳಿ ಪಡೆದರು. ‘ನಮ್ಮೊಂದಿಗೆ ತುಂಬಾ ಮಾತನಾಡುವುದಿದೆ’ ಎಂದು ಅರಸರು ಸಂಜೆಯ ಕೂಟಕ್ಕೆ ಆಹ್ವಾನಿಸಿ ಕೈ ಕುಲುಕಿದರು.
ಮುಂದೊಮ್ಮೆ ಅದೇ ಸ್ನೇಹದಿಂದ ತಮ್ಮ ಸಂಪುಟದಲ್ಲಿ ಮಂತ್ರಿಯಾಗುವಂತೆ ಅರಸರು ನೀಡಿದ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರಲ್ಲದೇ, ಯಾವತ್ತೂ ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ನಡೆಸಿದ ಮೊದಲ ಮುಖ್ಯಮಂತ್ರಿ ಪಟೇಲರು.
1996 ಮೇ 31 ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ 1999ರ ಅಕ್ಟೋಬರ್ 7 ರವರೆಗೆ ಸುಮಾರು 1200 ದಿನಗಳು ಅಂದರೆ ಜನ ತಾ ಪರಿವಾರದ ಹೆಗಡೆವರಿಗಿಂತ ಕಡಿಮೆ, ಎಸ್ ಆರ್ ಬೊಮ್ಮಾಯಿ ಮತ್ತು ದೇವೇಗೌಡರಿಗಿಂತ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಯಾಗಿದ್ದವರು. 1930 ಅಕ್ಟೋಬರ್ 1 ರಂದು ಶಿವಮೊಗ್ಗದ ಕಾರಿಗನೂರಿನಲ್ಲಿ ಜನಿಸಿದ ಈ ನಾಯಕ ಡಿಸೆಂಬರ್ 12 ಕ್ಕೆ ಬೆಂಗಳೂರಿ ನಲ್ಲಿ ಲಿಂಗೈಕ್ಯರಾದರು.

ಈಗ ಅವರಿದ್ದಿದ್ದರೆ 90 ವರ್ಷ……!
ಪಟೇಲರು ಮುಖ್ಯಮಂತ್ರಿಯಾಗಿ ತಮ್ಮ ಮಂತ್ರಿ ಮಂಡಲದ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯನೀಡಿದ್ದರು. ಕೊನೆಗೆ ಆ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಿ ಕೆಲವು ಮಂತ್ರಿಗಳು, ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಪಟೇಲರ ಆಡಳಿತ ಬಿಗಿ ತಪ್ಪಿದೆ ಯೆಂಬ ಆರೋಪವನ್ನು ತಮ್ಮ ಪಕ್ಷದ ಶಾಸಕರಿಂದಲೇ ಎದುರಿಸಬೇಕಾಯಿತು.
116 ಶಾಸಕರ ಬಹುಮತದಲ್ಲಿ 52 ಭಿನ್ನಮತೀಯ ಶಾಸಕರು ಒಂದು ಹಂತದಲ್ಲಿ ಪಟೇಲರ ವಿರುದ್ಧ ಸಹಿ ಹಾಕಿದ್ದರು.ಆದರೆ ಅವತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲು ಕಾತರಿಸಲಿಲ್ಲ. ಪ್ರತಿಯೊಬ್ಬರ ಚಲನವಲನಗಳನ್ನು ರಹಸ್ಯವಾಗಿ ತಿಳಿದುಕೊಂಡಿದ್ದ ಪಟೇಲರು ವೈಯಕ್ತಿಕವಾಗಿ ಕರೆದು ಚಾಟಿ ಬೀಸುತ್ತಿದ್ದರು.
ಮುಖ್ಯಮಂತ್ರಿಯ ಕಾವೇರಿ ನಿವಾಸದ ಪಕ್ಕದಲ್ಲೇ ರೇವಣ್ಣನವರ ಅನುಗ್ರಹ ನಿವಾಸದ ಮಹಡಿಯಲ್ಲಿ ದೇವೇಗೌಡರಿದ್ದರು. ಅವರನ್ನು ಭೇಟಿ ಮಾಡಿ ಭಿನ್ನಮತ ನಿವಾರಣೆಗೆ ಪಟೇಲರು ಉತ್ಸಾಹ ತೋರಲಿಲ್ಲ.ಯಾವತ್ತೂ ಅಧಿಕಾರಕ್ಕಾಗಿ ಹಾತೊರೆಯದ ಪಟೇಲರು ಈ ಸರ್ಕಾರವನ್ನು ಬೇಕಿದ್ದರೆ ಶಾಸಕರೇ ಉಳಿಸಿಕೊಳ್ಳಲಿ ಎಂದು ತಮ್ಮ ಪರವಾಗಿದ್ದ ಎಂ.ಪಿ.ಪ್ರಕಾಶ್ ಹಾಗೂ ನಾಣಯ್ಯನವರ ಮೂಲಕ ಸಂದೇಶ ರವಾನಿಸಿ ತಮ್ಮ ಕಾಯಕದಲ್ಲಿ ನಿರತರಾಗಿಬಿಟ್ಟರು.
ಬಹುಕಾಲದ ತಮ್ಮ ಗೆಳೆಯ ಜಾರ್ಜ್ ಫರ್ನಾಂಡೀಸ್ ಮತ್ತು ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿಯ ಜತೆಗೆ ಹೊಂದಾಣಿಕೆಗೆ ಅರೆ ಮನಸಿನ ಒಪ್ಪಿಗೆ ನೀಡಿದರು.ಆರು ತಿಂಗಳ ಮೊದಲೇ ಜನತಾದಳ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋದರು.

ಪಟೇಲರ ಜೆಡಿಯು, ದೇವೇಗೌಡರ ಜೆಡಿಎಸ್ ವಿಭಜನೆಯಿಂದ 1999ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿಯಲ್ಲಿ ಪಟೇಲರಿಗೆ ಬಿಜೆಪಿ ಕೈಕೊಟ್ಟದ್ದರಿಂದ ಅವರ ವಿರುದ್ಧ ವಡ್ನಾಳ್ ರಾಜಣ್ಣ, ಹೊಳೆನರಸಿಪುರದಲ್ಲಿ ರೇವಣ್ಣನವರ ವಿರುದ್ಧ ಕಾಂಗ್ರೆಸ್ ನ ಅಣ್ಣೇಚಾಕನಹಳ್ಳಿ ದೊಡ್ಡೇಗೌಡರು ಗೆದ್ದರು.
ಪಟೇಲರು ಸೋತರೂ ಕೂಡ ವಿಧಾನಸೌಧದ ಮುಂಭಾಗದಲ್ಲಿ ನಡೆದ ಎಸ್ ಎಂ ಕೃಷ್ಣರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೈರೇಗೌಡ, ಬಚ್ಚೇಗೌಡರ ಜತೆಗೆ ಹೆಜ್ಜೆ ಹಾಕಿ ಬಂದರು. ದೂರದಿಂದಲೇ ಪಟೇಲರನ್ನು ಗಮನಿಸಿದ ಕೃಷ್ಣ, ಸೌಧದ ಮೆಟ್ಟಿಲುಗಳನ್ನು ಇಳಿದು ಬಂದು ಪಟೇಲರ ಶುಭಾಶಯಗಳನ್ನು ಸ್ವೀಕರಿಸಿ ಹರ್ಷಗೊಂಡರು. ಸಂಜೆ ಸೇರೋಣ ಎಂದು ಹೊರಟರು.
ಪಟೇಲರು ವಿರೋಧಪಕ್ಷದ ಸಾಲಿನಲ್ಲಿ ಇರಬೇಕಿತ್ತು ಎಂದು ನಾವೆಲ್ಲಾ ನೊಂದು ಕೊಂಡೆವು. ಪಟೇಲರು ಮುಖ್ಯಮಂತ್ರಿಯಾಗಿ 7 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು.4,800 ಕೋಟಿ ರೂಪಾಯಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡಲು ವಾತಾವರಣ ಸೃಷ್ಟಿಸಿದರು.
ಘಟಪ್ರಭಾ,ಮಲಪ್ರಭಾ,ಆಲಮಟ್ಟಿ,ವರುಣಾ,ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣಕ್ಕೆ ಆಧ್ಯತೆ ನೀಡಿದ್ದರು.ಶಿಕ್ಷಣ ಮಂತ್ರಿ ಯಾಗಿದ್ದ ಮಲೆನಾಡಿನ ಗಾಂಧಿ ಹೆಚ್ .ಜಿ.ಗೋವಿಂದೇಗೌಡರು ಲಕ್ಷಾಂತರ ಶಿಕ್ಷಕರ ನೇಮಕಾತಿಯ ಫೈಲ್ ಹಿಡಿದು ಬಂದಾಗ ಗೌಡರೇ ಇಂತಹ ಉತ್ತಮ ಕೆಲಸಕ್ಕೆ ನನ್ನ ಅನುಮತಿ ಯಾಕೇ,ಮಾಡಿ ಶಹಭಾಷ್ ಎಂದ ಮಾನವೀಯ ಹೃದಯಿ ಪಟೇಲರು.ಕೂಡಲ ಸಂಗಮದ ಅಭಿವೃದ್ಧಿಗೆ ಕಂಕಣ ತೊಟ್ಟವರು ಅವರೇ….
ನೇರವ್ಯಕ್ತಿತ್ವ ಮತ್ತು ಹಾಸ್ಯ ಪ್ರವೃತ್ತಿ ಅವರಿಗೆ ಜನ್ಮಜಾತವಾಗಿ ಬಂದಿದ್ದು, ಅದರಿಂದಾಗಿ ಪಟೇಲರ ಸಾಧನೆಗಳು, ಸಮಾಜವಾದಿ ವಿಚಾರಧಾರೆಗಳು ಹಿನ್ನೆಲೆಗೆ ಸರಿದು ನಿಂತಿತು. ಪಟೇಲ್ ಅಂದಾಕ್ಷಣ ಯಾವ್ಯಾವುದೋ ಜೋಕುಗಳು ಅವರ ಹೆಸರಿನ ಜತೆಗೇ ಅಂಟಿಕೊಂಡು ಈಗಲೂ ಜೀವಂತವಾಗಿವೆ.
ಅರಸರು ಒಮ್ಮೆ ಅಸೆಂಬ್ಲಿಯಲ್ಲಿ ಬೊಮ್ಮಾಯಿಯವರು ಮಂಡಿಸಿದ ನಿಲುವಳಿ ಸೂಚನೆಗೆ ವಿವರಣೆ ನೀಡುತ್ತಿದ್ದರು. ಸುಮಾರು 30 ಮಂದಿ ಸಿಬಿಐ ಅಧಿಕಾರಿಗಳು ತಮ್ಮ ಮನೆಯನ್ನು ಶೋಧ ಮಾಡಿದ್ದು, ಮನೆಯ ಸುತ್ತಲಿನ ಜಾಗವನ್ನು ಅಗೆದರೂ ಏನೂ ಸಿಗಲಿಲ್ಲ ಎಂದು ಬೊಮ್ಮಾಯಿ ಮತ್ತು ದೇವೇಗೌಡರನ್ನು ನೋಡಿ ವ್ಯಂಗ್ಯ ಮಾಡಿದರು.
ತಕ್ಷಣ ಪ್ರತಿಕ್ರಿಯಿಸಿದ ಪಟೇಲರು ‘ಮುಖ್ಯಮಂತ್ರಿಗಳೇ ನಮ್ಮವರು ಬುದ್ದಿ ಇಲ್ಲದ ಕೆಲಸ ಮಾಡಿದ್ದಾರೆ. ಹೋಗಲಿ ಈಗಲಾದರೂ ಹೇಳಿ ನೀವು ಹಣ ಎಲ್ಲಿ ಇಟ್ಟಿದ್ದೀರಿ’ ಎಂದು ಗಂಭೀರವಾಗಿಯೇ ಕೇಳಿದಾಗ ಅರಸರೂ ಸೇರಿದಂತೆ ಇಡೀ ಸದನದ ಸದಸ್ಯರು ನಕ್ಕು ಹಗುರಾದರಂತೆ.

ಹೈಡಲ್, ಥರ್ಮಲ್, ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಘಟಕಗಳ ಬಗ್ಗೆ ಅತ್ಯಂತ ಹೆಚ್ಚಿನ ಜ್ಞಾನ ಹೊಂದಿದ್ದ ಪಟೇಲರಿಗೆ ವಿದ್ಯುತ್ ಮತ್ತು ಅಬಕಾರಿ ಖಾತೆಗಳು ಯಾವಾಗಲೂ ಜತೆಯಾಗಿರುತ್ತಿದ್ದವು. ಪರಿಸರದ ಅನಾನೂಕೂಲದಿಂದ ಕೆಲವು ವಿದ್ಯುತ್ ಯೋಜನೆಗಳನ್ನು ಅವರು ಒತ್ತಾಯಕ್ಕೆ ಮಣಿದು ಕೈ ಬಿಟ್ಟಿದ್ದು ಉಂಟು. ಅದರಲ್ಲಿ 600 ಮೆಗಾವ್ಯಾಟ್ ಉತ್ಪಾದನೆಯ ಬರಪೊಳೆ ಯೋಜನೆಯೂ ಒಂದು.
ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ದೆಹಲಿಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಖಾಸಗಿ ವಾಹಿನಿಯ ‘ಆಪ್ ಕಿ ಅದಾಲತ್’ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟೇಲರಷ್ಟೇ ನೇರ ಮಾತುಗಳಿಗೆ ಪ್ರಸಿದ್ಧಿಯಾಗಿದ್ದ ರಜತ್ ಶರ್ಮಾ ಹಿಂದಿಯಲ್ಲಿ ಪ್ರಶ್ನೆ ಕೇಳುತ್ತಿದ್ದರು. ಪಟೇಲರು ಇಂಗ್ಲಿಷ್ ನಲ್ಲಿ ತಮ್ಮ ಆಡಳಿತಾವಧಿಯ ಸಾಧನೆ ವೇದನೆಗಳನ್ನು ವಿವರಿಸುತ್ತಿದ್ದರು.
ಪ್ರಶ್ನೋತ್ತರದ ಕೊನೆಯಲ್ಲಿ ‘ಪಟೇಲ್ ಅಂದ್ರೆ ಸ್ತ್ರೀಲೋಲ ಮತ್ತು ಕುಡುಕ ಎಂದೇ ಗುರುತಿಸುತ್ತಾರಲ್ಲ’ ಎಂದು ಶರ್ಮಾ ಒಂದಷ್ಟು ಪತ್ರಿಕೆಗಳ ಕಟಿಂಗ್ಸ್ ಕೈಯಲ್ಲಿ ಹಿಡಿದುಕೊಂಡು ಪ್ರಶ್ನಿಸಿದರು.ಅಲ್ಲಿದ್ದವರಿಗೆಲ್ಲಾ ಕುತೂಹಲ ಇಮ್ಮಡಿಯಾಯಿತು. ಪಟೇಲರು ಸ್ವಲ್ಪವೂ ಮುಜುಗರಗೊಳ್ಳದೇ ತಮ್ಮ ಎಂದಿನ ಸಹಜ ಗಂಭೀರತೆಯಲ್ಲೇ ಇದ್ದರು. ಆರೋಪವನ್ನು ನಿರಾಕರಿಸಲಿಲ್ಲ. ಅವರು ಉತ್ತರಿಸಿದ ಶೈಲಿಗೆ ಪ್ರಶ್ನೆ ಕೇಳಿದ ಶರ್ಮಾ ಕೂಡ ಹಾದಿ ತಪ್ಪಿದಂತೆ ಕಂಡರು.
” ಹೌದು ನಾನು ಕುಡಿಯುತ್ತೇನೆ, ನಾನು ಮದ್ಯಪಾನ ಮಾಡುತ್ತೇನೆಯೇ ಹೊರತು ಮದ್ಯವು ನನ್ನನ್ನು ಕುಡಿಯುವುದಿಲ್ಲ; ನಾನು ಸೌಂದರ್ಯವನ್ನು ಆರಾಧಿಸುತ್ತೇನೆ. ಹಾಗೆಯೇ ಸೌಂದರ್ಯವು ನನ್ನನ್ನು ಇಷ್ಟ ಪಟ್ಟರೆ ನಾನು ಅದನ್ನು ನಿರಾಕರಿಸುವುದಿಲ್ಲ. ಇಷ್ಟಕ್ಕೂ ನಾನು ಪರಸ್ತ್ರೀ ಸಹವಾಸ ಮಾಡಿದರೆ ವಿರೋಧಿಸಬೇಕಾದದ್ದು ನನ್ನ ಪತ್ನಿ, ಉಳಿದವರಿಗೆ ಈ ಬಗ್ಗೆ ವಿರೋಧವೇಕೇ, ಒಂದಂತೂ ಸತ್ಯ ಇದರ ಬಗ್ಗೆ ನಾನು ಹಿಪೋಕ್ರೇಟ್ ಅಲ್ಲ. ” ಎಂದರು.
ಸಂದರ್ಶನ ಮುಗಿಸಿದ ರಜತ್ ಶರ್ಮಾ ಪಟೇಲರ ಕೈ ಹಿಡಿದು ಕುಲುಕಿ ‘ಇಷ್ಟು ದಿನದ ಸಂದರ್ಶನದಲ್ಲಿ ಮೊದಲ ಸಲ ನಾನು ಹಾದಿ ತಪ್ಪಿದೆ. ಇಂತಹ ಅನುಭವ ನನಗೆ ಹೊಸದು’ ಎಂದರಂತೆ. ಈ ವಿಚಾರ ಪತ್ರಿಕೆಗಳಲ್ಲಿ women and wine my weakness-Patel. ಮಾನಿನಿ ಮತ್ತು ಮದಿರೆ,ಮುಂತಾಗಿ ವಿಕೃತವಾಗಿ ವರದಿಯಾಗಿ ಅಸೆಂಬ್ಲಿಯಲ್ಲಿ,ರಾಜ್ಯದ ಜನರಲ್ಲಿ ಮುಖ್ಯಮಂತ್ರಿಯ ಕುರಿತು ವಿರೋಧಗಳು ಪ್ರತಿಭಟನೆಗಳು ನಡೆದವು.ಅದಕ್ಕೆಲ್ಲ ಪಟೇಲರು ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲಾ ಹೆಣ್ಣುಮಕ್ಕಳು ಸುಂದರಿಯರೇ, ಆದರೆ ಕೆಲವರು ತುಂಬಾ ಸುಂದರಿಯರು’ ಎಂಬುದು ಪಟೇಲ್ ಪಂಚ್.
ಅವತ್ತು ಆಪ್ ಕಿ ಅದಾಲತ್ ಸಂದರ್ಶನ ಫಿಕ್ಸ್ ಮಾಡಿಸಿದ ಮಹಾನುಭಾವ ಸರೋವರ ಶ್ರೀನಿವಾಸ್ ( ನಟ ಸುದೀಪ್ ಚಿಕ್ಕಪ್ಪ) ಸುಮಾರು ಮೂರು ತಿಂಗಳುಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಪಟೇಲರು ದೆಹಲಿಗೆ ಹೋದಾಗ ಅನಿವಾರ್ಯವಾಗಿ ಸಂದರ್ಶನ ನೀಡಬೇಕಾಯಿತು.
ದೆಹಲಿ ಯಾತ್ರೆ ಮುಗಿಸಿ ಬಂದ ಪಟೇಲರು ಅಸೆಂಬ್ಲಿಯಲ್ಲಿ ವಿರೋಧಪಕ್ಷದ ಟೀಕೆಗಳಿಗೆ ಉತ್ತರಿಸಬೇಕಿತ್ತು.ಅಧಿಕಾರಿಗಳಂತೂ ಹಗಲೂ ರಾತ್ರಿ ಕೂತು ಉತ್ತರ ಸಿದ್ದಪಡಿಸಿದ್ದರು.ಮುಖ್ಯಮಂತ್ರಿಗಳು ಅದರೆಡೆಗೆ ಒಮ್ಮೆ ಪಕ್ಷಿ ನೋಟ ಬೀರಿದ್ದರಷ್ಟೆ ! ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಕೆಂಡ ಮಂಡಲವಾಗಿ ಇಂತಹ ಅನೈತಿಕ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಹೇಳಿ, ಒತ್ತಾಯಿಸಿದಾಗಲೂ ಮೌನವಾಗಿ ಕುಳಿತಿದ್ದ ಪಟೇಲರಿಂದ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ಬಯಸಿದರು.
” ಇಲ್ಲಿರುವ ಯಾರೂ ಇವೆಡರಿಂದ ಹೊರತಾಗಿದ್ದರೇ ಕೈ ಎತ್ತಬಹುದು” ಎಂದು ಆಗಲೂ ಗಂಭೀರ ವದನರಾಗಿಯೇ ಹೇಳಿ ‘ವಾಟಾಳ್ ಒಬ್ಬರನ್ನು ಹೊರತು ಪಡಿಸಿ ‘ ಎಂದು ಸೇರಿಸಿದರು. ವಿರೋಧ ಪಕ್ಷದ ಸಾಲಿನಲ್ಲಿ ಬಿಜೆಪಿಯ ಹೆಚ್ ಎನ್ ನಂಜೇಗೌಡ, ಪ್ರಮೀಳಾ ನೇಸರ್ಗೀ, ಸಿಪಿಐಎಂನ ಶ್ರೀರಾಮರೆಡ್ಡಿ, ಎಐಎಡಿಎಂಕೆಯ ಗಾಂಧಿನಗರ ಕ್ಷೇತ್ರದ ಮುನಿಯಪ್ಪ, ಆಡಳಿತ ಪಕ್ಷದ ಸಾಲಿನಲ್ಲಿ ಸಿದ್ದರಾಮಯ್ಯ, ದೇಶಪಾಂಡೆ, ಸಿಂಧ್ಯಾ, ಮಂಜುನಾಥ್, ಪ್ರಕಾಶ್, ನಾಣಯ್ಯ, ಎಲ್ಲರ ಮುಖಗಳು ಅರಳಿದವು.
ಸಮಾಜವಾದಿ ಚಳವಳಿಯ ನೇತಾರ ಗೋಪಾಲಗೌಡರ ಅನುಯಾಯಿ ಪಟೇಲರು ಎರಡು ಸಲ ಜೈಲುವಾಸ ಅನುಭವಿಸಿದರು. ಕಾಗೋಡು ಚಳವಳಿ ಒಮ್ಮೆ, ಮತ್ತೊಮ್ಮೆ ಎಮರಜೆನ್ಸಿಯಲ್ಲಿ. ಅವರಿಗಾಗಿಯೇ ಕೃಷ್ಣ ಮಾಸಡಿ ನಿರ್ದೇಶನದಲ್ಲಿ ಗೆಳೆಯ ಶ್ರೀಹರಿಖೋಡೆಯವರಿಂದ ಹಣ ಹೂಡಿಸಿ , ಮಹಿಮಾ ಪಟೇಲರ ನಿರ್ಮಾಣದಲ್ಲಿ ‘ಅವಸ್ಥೆ ‘ ಚಲನಚಿತ್ರ ಅನಂತನಾಗ್ ನಾಯಕತ್ವದಲ್ಲಿ ತಯಾರಾಯಿತಾದರೂ ಪಟೇಲರ ಚಿಂತನೆಯಂತೆ ಸಿನಿಮಾ ಬಂದಿರಲಿಲ್ಲವಂತೆ.
ಒಮ್ಮೆ ಪಟೇಲರು ಕಾರಿಗನೂರಿನಲ್ಲಿ ಇದ್ದಾಗ ಚಪ್ಪಲಿ ಹೊಲೆಯುವ ಹುಡುಗನೊಬ್ಬ ಪಟೇಲರ ಬಳಿ ಬಂದು ಈ ಸಲ ಊರ ಜಾತ್ರೆಗೆ ಅಂಬರೀಷಣ್ಣ ,ಅನಂತನಾಗ್ ಕರೆಸಬೇಕು ಎಂಬ ಬೇಡಿಕೆಯಿಟ್ಟನಂತೆ. ಪಟೇಲರು ನಕ್ಕು ಆಯ್ತು ಹೋಗೋ ಎಂದರು. ಸುಮಾರು 1500 ಜನರಿರುವ ಕಾರಿಗನೂರಿನ ಜಾತ್ರೆಗೆ ಇಬ್ಬರು ನಟರು ಬಂದರು.ಅಂದು ಇಡೀ ರಾತ್ರಿ ಗ್ಲಾಸಸ್ಯ ಕಂಠಸ್ಯ…
ಹೀಗೆ ಪಟೇಲರು ಒಂದು ರಾತ್ರಿ ಕಾರಿನಲ್ಲಿ ಪಯಣಿಸುತ್ತ ನಿದ್ರೆಗೆ ಜಾರಿದ್ದರು.ರಸ್ತೆ ಉಬ್ಬು ತಗ್ಗುಗಳಿಂದ ಕೂಡಿದ್ದರಿಂದ ನಿದ್ದೆಗಣ್ಣಿ ನಲ್ಲೇ ಚಾಲಕನಿಗೆ ಯಾವೂರ ರಸ್ತೆಯಪ್ಪ ಇದು ? ಯಾರು ಇಲ್ಲಿ ಎಂ ಎಲ್ ಎ ಎಂದು ಚಾಲಕನನ್ನು ಪ್ರಶ್ನಿಸಿದರು. ಸಾರ್ ಇಲ್ಲಿ ತಾವೇ ಎಂಎಲ್ ಎ,ಇದು ಕಾರಿಗನೂರು ರಸ್ತೆ ಎಂದನಂತೆ. ಮುಂದೆ ಪಟೇಲರ ಸಂಪುಟದಲ್ಲಿ ಉಮೇಶ್ ಕತ್ತಿ ಲೋಕೋಪಯೋಗಿ ಮಂತ್ರಿಯಾದಾಗ ಆ ರಸ್ತೆ ಅಭಿವೃದ್ಧಿ ಕಂಡಿತು.
ಹೆಂಡದ ದೊರೆ ಎಂದೆ ನಾಮಾಂಕಿತರಾಗಿದ್ದ ಹರಿಖೋಡೆ ದೇವರಾಜ ಅರಸರಷ್ಟೇ ಪಟೇಲರಿಗೂ ‘ಗ್ಲಾಸಸ್ಯ ಕಂಠಸ್ಯ’. ಅವರಿಬ್ಬರದು ನೂರಾರು ರಸಭರಿತ ಸಂಗೀತಮಯ ಕಥೆಗಳಿವೆ. ಪಟೇಲರು ಸಂಗೀತ ಹಾಗೂ ಪುಸ್ತಕ ಪ್ರಿಯರು. ತಮಗೆ ಬೇಕಾದದ್ದು ಪಡೆದೇ ತೀರುವ ಸಾಮ್ಯತೆ ಇಬ್ಬರಲ್ಲೂ ಇತ್ತು.ಹರಿಖೋಡೆಯ ವರನ್ನು ‘ಯಜಮಾನ್’ ಎಂದು ಕರೆಯುತಿದ್ದರು. ಅವರು ‘ಜೀ ಹುಜೂರ್’ ಎನ್ನುತ್ತಿದ್ದರು.ಜನತಾ ಪಕ್ಷ, ಜನತಾದಳದ ಚುನಾವಣೆಗಳು ನಡೆಯುತ್ತಿದ್ದದ್ದೇ ಹರಿ ಖೋಡೆ ಹಣದಲ್ಲಿ, ಅದಕ್ಕೆ ಪ್ರೇರಕರೂ ಕಾರಕರೂ ಪಟೇಲರೇ ಹಾಗಂತ ಯಾವ ಶಾಸಕನ ಮೇಲೂ ಅಧಿಕಾರಯುತವಾದ ಹಕ್ಕನ್ನು ಚಲಾಯಿಸದ ಪಟೇಲರ ಕುರಿತು ಹೇಳುತ್ತಲೇ ಇರಬಹುದು.
ಪಟೇಲರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಶಂಕರಲಿಂಗಪ್ಪ ಹಾಗೂ ಸೇವಾವ್ರತಿಯಾಗಿದ್ದ ಗನ್ ಮನ್ ಗೌಡರನ್ನು ನೆನಯಲೇಬೇಕು.ಅಕ್ಟೋಬರ್ 2 ಗಾಂಧಿ ಜಯಂತಿ. ಅದಕ್ಕೂ ಮುನ್ನವೇ ಬರುತ್ತೆ ಪಟೇಲ್ ಜಯಂತಿ ! ನಮ್ಮ ನಾಡಿಗೊಬ್ಬರೇ ಪಟೇಲರು ….. ಅವರೆಂದಿಗೂ ಶ್ಯಾನುಭೋಗರಾಗಲಿಲ್ಲ.ಅವರ ಅಂಗಿಗೆ ಜೇಬುಗಳೇ ಇರಲಿಲ್ಲ.ಗಳಿಸಿದ್ದು ಕಳೆದಿದ್ದು ಲೆಕ್ಕವಿಡಲಿಲ್ಲ….ನಮ್ಮ ಪಟೇಲರು…!?