ಬೆಂಗಳೂರು : ಹಾನಗಲ್ ಮತ್ತು ಸಿಂಧಗಿ ಎರಡೂ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಸಂಬಂಧ ಬಿಜೆಪಿ ಇಂದು ಕೋರ್ ಕಮಿಟಿ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಸಿತು.
ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಆಂತರಿಕ ಹಾಗೂ ಗ್ರೌಂಡ್ ರಿಪೋರ್ಟ್ ಪಡೆಯಲಾಗಿದೆ, ಇವೆರೆಡೂ ಬಿಜೆಪಿ ಪರ ಇದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ, ಅನೇಕ ಅಭ್ಯರ್ಥಿಗಳಬಗ್ಗೆ ಚರ್ಚಿಸಿ ಕೊನೆಯದಾಗಿ ಮೂರು, ಎರಡು ಹೆಸರುಗಳನ್ನು ಅಂತಿಮ ಮಾಡಿ, ಕೇಂದ್ರಕ್ಕೆ ಕಳುಹಿಸಿಕೊಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಸಭೆಯ ಬಳಿಕ ಸಿ ಟಿ ರವಿ ತಿಳಿಸಿದ್ದಾರೆ.

ನಮ್ಮ ಮೊದಲ ಆದ್ಯತೆ ಎರಡೂ ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು ಎನ್ನುವುದಾಗಿದೆ. ಉದಾಸಿ ಕುಟುಂಬಕ್ಕೆ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದೇನಿದ್ರು ಆಂತರಿಕ ರಿಪೋರ್ಟ್ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡೋದು ಅಷ್ಟೇ ಎಂದು ಸೂಚ್ಯವಾಗಿ ಉತ್ತರಿಸಿದರು.
ಮೂಲಗಳ ಪ್ರಕಾರ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಾಲ್ವರು ಅಭ್ಯರ್ಥಿಗಳ ಹೆಸರುಗಳನ್ನು ಅಖೈರು ಮಾಡಲಾಗಿದೆ ಎಂದು ತಿಳಿದುಬಂದಿದೆ. ರೇವತಿ (ಸಂಸದ ಶಿವಕುಮಾರ ಉದಾಸಿ ಪತ್ನಿ ), ಶಿವರಾಜ ಸಜ್ಜನ್ ಶೆಟ್ಟರ್ ಹಾಗೂ ಬಿ ವೈ ವಿಜೆಯೇಂದ್ರ.
ಹಾಗೆಯೇ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್ ಬೂಸನೂರು, ಸಂಗನಗೌಡ ಪಾಟೀಲ್, ಸಿದ್ದು ಬಿರಾದಾರ ಹೆಸರು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ರಾಜ್ಯ ಬಿಜೆಪಿ ಘಟಕ ಶಿಫಾರಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಆದ್ರೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಹಾನಗಲ್ ನಲ್ಲಿ ಸೀಟು ಕೊಡಿಸಬೇಕೆಂದು ಬಹಳ ಪ್ರಯತ್ನ ನಡೆಸುತ್ತಿದ್ದು, ಅಂತಿಮವಾಗಿ ಪಕ್ಷದ ಹೈಕಮಾಂಡ್ ಯಾರ ಹೆಸರನ್ನು ಅಂತಿಮಗೊಳಿಸಲಿದೆ ಅನ್ನೋದನ್ನ ಕಾದುನೊಡಬೇಕಾಗಿದೆ.
ಬಿ ವೈ ವಿಜೆಯೇಂದ್ರ ಅವರನ್ನು ಹೈಕಮಾಂಡ್ ಪರಿಗಣಿಸದೇ ಇದ್ದರೆ, ಶಿವರಾಜ್ ಸಜ್ಜನ್ ಶೆಟ್ಟರ್, ಸಿಂಧಗಿಯಲ್ಲಿ ರಮೇಶ್ ಬೂಸನೂರು ಅವರ ಹೆಸರು ಅಖೈರಾಗುವ ಸಾಧ್ಯತೆಗಳಿವೆ.
ಹಾಗೆಯೇ ಹಾನಗಲ್‌ಗೆ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಿಂಧಗಿಗೆ ಮಾಜಿ ಸಚಿವ ಲಕ್ಷ್ಮಣ್ ಸವದಿಗೆ ಚುನಾವಣಾ ಉಸ್ತುವಾರಿ ನೀಡಿದಲಾಗಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ , ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಆರ್. ಅಶೋಕ್ , ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಸದಾನಂದಗೌಡ ಉಪಸ್ಥಿತರಿದ್ದರು.