ವಿಜಯನಗರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯನಗರ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಯತ್ತ ಪ್ರಯಾಣ ಬೆಳೆಸಿದರು. ಇದೇ ಸಂದರ್ಭದಲ್ಲಿ ಬಳ್ಳಾರಿಯ ಅಲ್ಲಿಪುರದ ಶ್ರೀ ಸದ್ಗುರು ಮಹಾದೇವ ತಾತನವರ ಮಠ ಭೇಟಿ ನೀಡಿದರು.
ಕೆಲ ಹೊತ್ತು ಮಠದಲ್ಲಿ ಏಕಾಂತದಲ್ಲಿ ಕಾಲ ಕಳೆದ ಮುಖ್ಯಮಂತ್ರಿ ಅವರು, ನಂತರ ಅಲ್ಲಿಯ ಆಡಳಿತ ಮಂಡಳಿಯೊಂದಿಗೆ ಕೆಲಕಾಲ ಚರ್ಚಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ , ಸಾರಿಗೆ ಸಚಿವರಾದ ಬಿ ಶ್ರೀರಾಮುಲು, ಮಾಜಿ ಸಂಸದೆ ಜೆ ಶಾಂತಾ, ಶಾಸಕ ಸೋಮಶೇಖರ್ ರೆಡ್ಡಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ವಿಜಯನಗರ ಜಿಲ್ಲೆಯಲ್ಲಿ ರೈತರ ಅಹವಾಲುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಿದರು. ಹಲವು ರೈತ ಸಂಘಟನೆಗಳ ಮುಖಂಡರು ಸಿಎಂ ಅವರನ್ನು ಭೇಟಿ ಮಾಡಿದರು. ಕಿಸಾನ್ ಜಾಗೃತಿ ವಿಕಾಸ ಸಂಘ , ಹೊಸಪೇಟೆ ಸಕ್ಕರೆ ಕಾರ್ಖಾನೆಗಾಗಿ ಐಕ್ಯ ಹೋರಾಟ ಸಮೀತಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸಿಎಂ ಭೇಟಿ ಮಾಡಿದರು.
ತಮ್ಮ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು. ರೈತರ ಮನವಿ ಸ್ವೀಕರಿಸಿ ಸಮಸ್ಯೆಯನ್ನು ಆದಷ್ಟು ಬೇಗನೇ ಬಗೆಹರಿಸುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದರು.