ಬೆಂಗಳೂರು : ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ ಅವರು, ಇದೊಂದು ಕೊಲೆಗೆಡುಕ ಸರ್ಕಾರ ಎಂದಿದ್ದಾರೆ.
ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು ‘ಕೊಲೆಗೆಡುಕ ಸರಕಾರ’.

ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರಕಾರ ಇಂಥವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ.
ಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೊನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೆರವಾಗಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು @BSBommai ಅವರನ್ನು ಒತ್ತಾಯ ಮಾಡುತ್ತೇನೆ. ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಟ್ವಿಟರ್ ನಲ್ಲಿ ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.