ರಸ್ತೆ ಗುಂಡಿಯ 20,000 ಕೋಟಿ ರೂ. ಎಲ್ಲಿ ಹೋಯಿತು? ಸಿಎಂಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು : ಮಹಾಮಳೆಯಿಂದ ಬೆಂಗಳೂರು ತತ್ತರಿಸಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಸಿಎಂ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು? ಎಲ್ಲಿ ಖರ್ಚಾಯಿತು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಒಂದೇ ಮಳೆ ನಗರದಲ್ಲಿ ದೊಡ್ಡ ಅನಾಹುತ ಉಂಟು ಮಾಡಿದೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ನಿರ್ವಹಣೆ ಕಳಪೆಯಾಗಿದೆ. ಹಾಗಾದ್ರೆ ರಸ್ತೆಗಳಿಗೆ ತೆಗೆದಿಟ್ಟ ಹಣ ಎಲ್ಲಿ ಹೋಯಿತು?  ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಒತ್ತಾಯಿಸಿದರು.

ನಿನ್ನೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೂರಾರು ಕೋಟಿ ವೆಚ್ಚದ ಯೋಜನೆಗಳಿಗೆ ಸಿಎಂ, ಸಚಿವರು ಚಾಲನೆ ನೀಡಿದ್ದರು. ಸಂಜೆಗೆ ಮಳೆ ಬಂದು ಆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಬೆತ್ತಲು ಮಾಡಿತು. ಮನೆಗಳಿಗೆ ನೀರು ನುಗ್ಗಿ ಜನ ಇಡೀ ರಾತ್ರಿ ಜಾಗರಣೆ ಮಾಡಿದರು. ಮಳೆ ನೀರಿನಲ್ಲಿ ಹಸು, ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವರು ಯಾವ ರೀತಿಯ  ಅಭಿವೃದ್ಧಿ ಎಂಬುದು ಸ್ಪಷ್ಟವಾಗಬೇಕಾಗಿದೆ ಎಂದು ಕುಮಾರಸ್ವಾಮಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ತನಿಖೆಗೆ ಒತ್ತಾಯ

ರಾಜರಾಜೇಶ್ವರಿ ನಗರ ಕ್ಷೇತ್ರ ಪ್ರಗತಿಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರುಪಾಯಿ ಹಣ ಹರಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ನಿರಂತರವಾಗಿ ಈ ಕ್ಷೇತ್ರಕ್ಕೆ ಹರಿದ ಹಣದ ಹೊಳೆ ಎತ್ತ ಹರಿಯಿತು? ಈ ಹಣವೂ ಸೇರಿ ಗುಂಡಿಗಳಿಗೆ ಖರ್ಚಾಗಿದೆ ಎಂದು ಸಿಎಂ ಹೇಳಿದ್ದ 20 ಸಾವಿರ ಕೋಟಿ ಹಣ ಏನಾಯಿತು ಎಂಬ ಮಾಹಿತಿ ಜನರಿಗೆ ಬೇಡವೇ? ಈ ಬಗ್ಗೆ ತನಿಖೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ಸಭೆ ನಡೆಸಲು ಪರ್ಮಿಷನ್ ಬೇಕಿತ್ತು!

ನಾನು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಉಸ್ತುವಾರಿ ಕಾಂಗ್ರೆಸ್ ಪಕ್ಷದ ಕೈಲಿ ಇತ್ತು. ನಾನು ನಗರದ ಬಗ್ಗೆ ಒಂದು ಸಭೆ. ಮಾಡಬೇಕಾದರೂ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕಾಗಿತ್ತು. ಆದರೆ ಅವರು ಒಪ್ಪುತ್ತಿರಲಿಲ್ಲ. ನಾನು ಸಿಎಂ ಆಗಿದ್ದಷ್ಟು ದಿನ ಬೆಂಗಳೂರು ರಿವ್ಯೂವ್ ಮೀಟಿಂಗ್ ಮಾಡಿರಲಿಲ್ಲ. ಇದು ಸತ್ಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು  ಮಾಹಿತಿ ನೀಡಿದರು.

ಪ್ರಚಾರ ಪ್ರಿಯ ಸರಕಾರ

ಜನರು ಕಣ್ಣೆರಿನಲ್ಲಿ ಕೈ ತೊಳೆಯುತ್ತಿದ್ದರೆ ಸರಕಾರ ಪ್ರಚಾರದಲ್ಲಿ ಮುಳುಗಿದೆ. ಜಾಹೀರಾತುಗಳ ಮೂಲಕ ಸ್ವ ಪ್ರಶಂಸೆಯಲ್ಲಿ ಮುಳುಗಿದೆ. ಮೋದಿ, ಬೊಮ್ಮಾಯಿ ಇಬ್ಬರೂ ನವ ಭಾರತಕ್ಕಾಗಿ ನವ ಕರ್ನಾಟಕವೆಂದು ಪ್ರಚಾರ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಬಸ್ ನಿಲ್ದಾಣಗಳ ಮೇಲೆ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ? ನವ ಕರ್ನಾಟಕ ಏನು ಅನ್ನೋದು ನನಗೇ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂದರು. ಉತ್ತರ ಪ್ರದೇಶದಲ್ಲಿ ಹಲವು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ ಪ್ರವಾಹದಲ್ಲಿ ಜನರ ಬದುಕು ಕೊಚ್ಚಿ ಹೋಗುತ್ತಿದೆ. ನವ ಭಾರತ ಎಂದರೆ ಇದೇನಾ? ಎಂದು ಅವರು ಕಟುವಾಗಿ ಪ್ರಶ್ನೆ ಮಾಡಿದರು.

ಉತ್ತರ ಪ್ರದೇಶ ಘಟನೆ ಅಕ್ಷಮ್ಯ ಅಪರಾಧ 

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರದ ಮಂತ್ರಿಯ ಪುತ್ರ ವಾಹನ ಹತ್ತಿಸಿದ್ದಾರೆ. ಇದು ಹೇಯ ಮತ್ತು ಅಕ್ಷಮ್ಯ. ನಂತರ ನಡೆದ ಪ್ರತಿಭಟನೆಯಲ್ಲಿ ಇನ್ನಷ್ಟು ರೈತರು ಸಾವನ್ನಪ್ಪಿದ್ದಾರೆ. ಇದೇನಾ ನವ ಭಾರತ? ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ನವಭಾರತ ಕಟ್ಟುತ್ತಿರುವುದು ಹೀಗೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

More News

You cannot copy content of this page