ಉತ್ತರ ಪ್ರದೇಶ : ಉತ್ತರಪ್ರದೇಶದ ಹರಗಾಂವ್ ನಲ್ಲಿ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಮನೆಗೆ ತೆರಳುವಾಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಹಾಗೆಯೇ ಇದೇ ವೇಳೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ತಿ ಅಖಿಲೇಶ್ ಯಾದವ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯ ನಾಥ ಯೋಗಿ ಸರ್ಕಾರ ಗೃಹ ಬಂಧನದಲ್ಲಿರಿಸಿದೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಭೇಟಿಗಾಗಿ ಆಗ್ರಹಿಸಿ ರೈತರು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ನಾಲ್ವರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದಾರೆ ಎಂದು ರೈತರು ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿತ್ತು. ವಾಹನಗಳಿಗೆ ಬೆಂಕಿ ಹಚ್ಚಿ ಉರಿಯುತ್ತಿರುವುದು, ಗಾಯಗೊಂಡವರು ನೆಲದ ಮೇಲೆ ಮಲಗಿರುವುದು ವಿಡಿಯೊದಲ್ಲಿದೆ. ಪ್ರಕರಣದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈಘಟನೆಯನ್ನು ಖಂಡಿಸಿ ಲಖಿಂಪುರ್ ಖೇರಿಗೆ ಪ್ರಿಯಾಂಕಾ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಪೊಲೀಸರು ಅವರನ್ನು ಎಳೆದಾಡಿ ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಟ್ವೀಟ್ ಮಾಡಿದ್ದು, ಪ್ರಿಯಾಂಕಾ ಪೊಲೀಸರೊಂದಿಗೆ ಮಾತನಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ಈ ದೇಶದಲ್ಲಿ ಏನಾಗುತ್ತಿದೆ? Z+ ಭದ್ರತೆಯಿರುವ ನಾಯಕಿಯನ್ನು ಯಾವುದೇ ವಾರಂಟ್ ಇಲ್ಲದೇ ಪೊಲೀಸರು ಬಂಧಿಸಿದ್ದಾರೆ’ ಎಂದು ಬರೆದಿದ್ದಾರೆ.
ಶ್ರೀನಿವಾಸ್ ಅವರು ಬರೆದ ಟ್ವೀಟ್ ಹೀಗಿದೆ
ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದ್ದರು. ಪ್ರಿಯಾಂಕಾ ಆ ಆದೇಶವನ್ನು ಧಿಕ್ಕರಿಸಿ ಭಾನುವಾರ ರಾತ್ರಿ ಲಖನೌದಿಂದ ಲಖಿಂಪುರ್ ಖೇರಿಗೆ ತೆರಳಿದರು. ಉತ್ತರ ಪ್ರದೇಶ ಪೊಲೀಸರು ಇಂದು (ಸೋಮವಾರ) ಬೆಳಗಿನ ಜಾವ 5.30 ರ ಸುಮಾರಿಗೆ ಹರಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಿಯಾಂಕಾರನ್ನು ಬಂಧಿಸಿದ್ದಾರೆ. ಅವರನ್ನು ಸೀತಾಪುರ ಜಿಲ್ಲೆಯ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ. ಜನರು ಬೆಂಬಲ ನೀಡಲು ಆ ಪ್ರದೇಶವನ್ನು ತಲುಪುವಂತೆ ಯುಪಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಗೃಹಬಂಧನ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಅವರನ್ನು ಲಕ್ನೋದಲ್ಲಿರುವ ಅವರ ಮನೆಯಲ್ಲಿ ಬಂಧನದಲ್ಲಿ ಇರಿಸಲಾಗಿದೆ.