ಬೆಂಗಳೂರು : ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲರ ಅನುಭವ, ಸಲಹೆ ಹಾಗೂ ಮಾರ್ಗದರ್ಶನ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದಲ್ಲಿರುವ ಸೆಂಚುರಿ ಕ್ಲಬ್ ಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ನನಗೆ ನನ್ನದೇ ಜವಾಬ್ದಾರಿಗಳಿವೆ. ನಾನು ಅನೇಕ ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಕಟ್ಟಬೇಕು. ಸರತಿಯ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೂ ತನ್ನ ಅಹವಾಲುಗಳನ್ನು ಆಲಿಸುವ ಸರ್ಕಾರ ಇದೆ ಎನಿಸುವಂತೆ ಕೆಲಸ ಮಾಡಬೇಕು ಎನ್ನುವ ಆಶಯ ನಮ್ಮ ಸರ್ಕಾರದ್ದು ಎಂದು ತಿಳಿಸಿದರು.

ರಾಜ್ಯದ ಆರ್ಥಿಕತೆ ಬೆಳೆಯಲು ಎಲ್ಲಾ ಕ್ಷೇತ್ರದ ಜನ ಬೆಳೆದು, ಅಭಿವೃದ್ಧಿ ಹೊಂದಬೇಕು. ಜನರ ಶ್ರಮದಿಂದಲೇ ಆರ್ಥಿಕತೆ ನಿಜವಾಗಿಯೂ ಅಭಿವೃದ್ಧಿಯಾಗುವುದು ಎಂದು ಅವರು ಅಭಿಪ್ರಾಯಪಟ್ಟರು. ಸೆಂಚುರಿ ಕ್ಲಬ್ ನಲ್ಲಿ ತಾವು ಕಳೆದ ಸಮಯವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಸೆಂಚುರಿ ಕ್ಲಬ್ ಗೆ ತನ್ನದೇ ಸುದೀರ್ಘ ಇತಿಹಾಸವಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರಿದ್ದ ವ್ಯಕ್ತಿತ್ವ ಅಪರೂಪದ್ದು. ಅವರಿಂದ ಪ್ರಾರಂಭಗೊಂಡ ಈ ಕ್ಲಬ್ ಅತ್ಯಂತ ವೈಶಿಷ್ಟ್ಯಪೂರ್ಣ ಎಂದರಲ್ಲದೆ ಈ ಪರಂಪರೆಯನ್ನು ನಾವು ಮುಂದುವರಿಸಬೇಕು. ಬೆಂಗಳೂರು ಮಾತ್ರವಲ್ಲ ದೇಶದಲ್ಲಿಯೇ ಇದು ಅತ್ಯುತ್ತಮ ಕ್ಲಬ್ ಎಂದು ತಿಳಿಸಿದರು.
ಇಕೋ- ಎಕಾನಮಿ ಅತ್ಯಗತ್ಯ
ಸೆಂಚುರಿ ಕ್ಲಬ್ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ಅತ್ಯಂತ ಯೋಜಿತವಾಗಿ ಅಭಿವೃದ್ಧಿಯಾಗಬೇಕು. ಇಕೋ- ಎಕಾನಮಿ ಎನ್ನುವ ಹೊಸ ಪದ ಹುಟ್ಟಿಕೊಂಡಿದ್ದು, ಆರ್ಥಿಕತೆ ಮತ್ತು ಪರಿಸರದ ಸಮತೋಲನ ಸಾಧಿಸಬೇಕು. ಇದನ್ನು ಸಾಧಿಸಲು ವೇಗದ ಅಭಿವೃದ್ಧಿ ಹಾಗೂ ಪರಿಸರದ ಮಧ್ಯೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮುಂದಿನ ಆಯವ್ಯಯದಲ್ಲಿ ಪರಿಸರದ ಕೊರತೆಗಳನ್ನು ಪಟ್ಟಿ ಮಾಡಿ, ಈ ಕೊರತೆಯನ್ನು ತುಂಬಲು ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ಮಂಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಶಾಸಕ ಉದಯ್ ಗರುಡಾಚಾರ್, ಸೆಂಚುರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯ್ಡು ಉಪಸ್ಥಿತರಿದ್ದರು.