ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು RSS ಬಗ್ಗೆ ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈಪರಚಿಕೊಳ್ಳುತ್ತಿರುವುದು ನೋಡಿದರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಟಿಕೀಸಿದ್ದಾರೆ.
ಟೀಕೆ ಮಾಡುವ ಭರದಲ್ಲಿ ಕಟೀಲ್ ಅವರು ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಹೇಳಿದ್ದಾರೆ. ಆದರೆ, ನಿಮ್ಮ ಪಕ್ಷದ ಫ್ಯಾಮಿಲಿ ಬಿಸಿನೆಸ್ʼಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ? ಎಂದು ಹೆಚ್ ಕೆ ಕುಮಾರಸ್ವಾಮಿ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಣ್ಣೀರಿಡುತ್ತಲೇ ಕಳೆದುಕೊಂಡರು ಯಾಕೆ? ಅದು ಫ್ಯಾಮಿಲಿ ಬಿಸಿನೆಸ್ʼನಿಂದ ಅಲ್ಲವೇ? ನಿಮ್ಮ ಪಕ್ಷದ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ನಿಮ್ಮ ಮುಖ್ಯಮಂತ್ರಿಯ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕೆ ಮಾಡಿದ್ದನ್ನು ಮರೆತು ಬಿಟ್ಟಿರಾ ಕಟೀಲ್ ಅವರೇ? ಅನುಗ್ರಹದ ಹಿತ್ತಲಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಹೇಳಲಿಲ್ಲವೇ? ಎಂದು ಆರೋಪಿಸಿದ್ದಾರೆ.

ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ, ಸರಿ. ಸಂಘದ ಸ್ವಯಂ ಸೇವಕರು ದೇಶ ಸೇವೆ ಮಾಡುತ್ತಿದ್ದಾರೆ ಎನ್ನುತ್ತೀರಿ. ಹಾಗಾದರೆ, ಎಲ್ಲರನ್ನೂ ಗಡಿಗೆ ಕಳುಹಿಸಿ. ಗಡಿಯಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ಇದೆ. ಕಟೀಲ್ ಅವರೇ, ಸುಖಾಸುಮ್ಮನೆ ಮಾತನಾಡುವುದಲ್ಲ, ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟಿಕೀಸಿದ್ದಾರೆ.