ಕೊಲೆ ಪ್ರಕರಣ ಭೇದಿಸಿದ ಖಾಕಿ ಪಡೆ : ಶ್ರೀರಾಮಸೇನೆ ಹಿಂದೂಸ್ತಾನ್ ಪ್ರಮುಖನ ಬಂಧನ

ಬೆಳಗಾವಿ: ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿದ್ದನೆಂಬ ಕಾರಣಕ್ಕೆ ಯುವಕನನ್ನ ಕೊಲೆ ಮಾಡಿ, ರೈಲ್ವೆ ಹಳಿಯಲ್ಲಿ ಬಿಸಾಕಿ ಆತ್ಮಹತ್ಯೆ ಎಂಬ ಕಟ್ಟುಕಥೆ ಕಟ್ಟಿದ್ದ ಪ್ರಕರಣವನ್ನ ಬೇಧಿಸುವಲ್ಲಿ ಖಾನಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಪ್ಟಂಬರ್ 28ರಂದು ರೈಲ್ವೆ ಹಳಿಯಲ್ಲಿ ಅರ್ಬಾಜ್ ಮುಲ್ಲಾ ಎಂಬ ಯುವಕನ ಮೃತ ದೇಹ ಪತ್ತೆಯಾಗಿತ್ತು. ಆದರೆ, ಇದು ಆತ್ಮಹತ್ಯೆಯಲ್ಲ ಎಂಬ ಸಂಶಯವಿದ್ದ ಕಾರಣ, ರೈಲ್ವೆ ಪೊಲೀಸರು ಬೆಳಗಾವಿ ಪೊಲೀಸರಿಗೆ ಪ್ರಕರಣವನ್ನ ಹಸ್ತಾಂತರ ಮಾಡಿದ್ದರು.

ತನಿಖೆಯ ಜಾಡು ಹಿಡಿದು ಹೊರಟ ತಂಡಕ್ಕೆ ಅಚ್ಚರಿಯ ಸತ್ಯ ಗೊತ್ತಾಗಿದೆ. ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿದ್ದರಿಂದಲೇ ಹೀಗೆ ಆಗಿದೆ ಎಂದು ಹೇಳಲಾಗಿದೆ. ಕೊಲೆ ಪ್ರಕರಣದಲ್ಲಿ ಯುವತಿಯ ತಂದೆ ಈರಪ್ಪ ಕುಂಬಾರ, ತಾಯಿ ಸುಶೀಲಾ ಕುಂಬಾರ, ಶ್ರೀರಾಮ ಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ನಾಗಪ್ಪ ಮುತಗೇಕರ, ಕುತ್ಬುದ್ಧೀನ ಭೇಪಾರಿ, ಪ್ರಲ್ಹಾದ ಸುಗತೆ, ಮಂಜುನಾಥ ಗೊಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ, ಪ್ರವೀಣ ಪೂಜೇರಿ, ಶ್ರೀಧರ ಡೋಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಗೆಯೇ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದರಿಂದ, ಆರೋಪಿಗಳನ್ನಪತ್ತೆಹಚ್ಚಲಾಗಿದೆ.

More News

You cannot copy content of this page