ಮಾಜಿ ಸಿಎಂ ಆಪ್ತ ಉಮೇಶ್ ನ, ಸ್ನೇಹಿತನ ಮನೆ ಮೇಲೆ ಐಟಿ ದಾಳಿ : 3 ನೇ ದಿನವೂ ಮುಂದುವರಿದ ಶೋಧ ಕಾರ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ನಿನ್ನೆಯಿಂದ ಉಮೇಶ್ ನ ಸ್ನೇಹಿತ ಸೋಮಶೇಖರ್ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ಉಮೇಶ್ ಆಪ್ತ ಸೋಮಶೇಖರ್ ಮನೆ ಮೇಲೆ ಇಂದೂ ಕೂಡ ಐಟಿ ದಾಳಿ ಮುಂದುವರೆದಿದ್ದು, ತಡ ರಾತ್ರಿವರೆಗೂ ಶೋಧಕಾರ್ಯ ನಡೆದಿತ್ತು. ಅದು ಇಂದೂ ಕೂಡ ಮುಂದುವರೆದಿದೆ. ಹಾಗೆಯೇ ಇನ್ನು ಅನೇಕ ಗುತ್ತಿಗೆದಾರರ ಮನೆ ಮತ್ತು ಕಚೇರಿಯ ಮೇಲೂ ದಾಳಿ ಇಂದೂ ಮುಂದುವರೆದಿದೆ.

ಸೋಮಶೇಖರ್ ಮನೆಯಲ್ಲಿ ಇಬ್ಬರು ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಉಮೇಶ್ ಗೆ ಅತ್ಯಾಪ್ತರಾಗಿರೋ ಸೋಮಶೇಖರ್, ಜೊತೆಯಲ್ಲಿಯೇ ಅನೇಕ ವ್ಯವಹಾರಗಳನ್ನು ನಡೆಸಿದ್ದರು ಎಂದು ತಿಳಿದುಬಂದಿದೆ.

ಸೋಮಶೇಖರ್ ಹಾಗೂ ಉಮೇಶ್ ನಡುವೆ ಸಾಕಷ್ಟು ಹಣದ ವ್ಯವಹಾರ ನಡೆದಿರೋ ಗುಮಾನಿ ಇದ್ದ ಕಾರಣದಿಂದ ಈ ದಾಳಿ ನಡೆದಿದೆ. ಉಮೇಶ್ ಕೆಲ ಕಾಂಟ್ರಾಕ್ಟ್ ಗಳ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಸೋಮಶೇಖರ್ ನಿವಾಸದಲ್ಲಿ ಮಹತ್ವದ ದಾಖಲಾತಿಗಳು ಪತ್ತೆಯಾಗಿವೆ.

ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್ ಗಳನ್ನ ಸೋಮಶೇಖರ್ ಪಡೆದಿದ್ದ, ಈ ಹಿನ್ನೆಲೆಯಲ್ಲಿ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು  ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  

ಸಹಕಾರ ನಗರದ ರಾಹುಲ್ ಎಂಟರ್ ಪ್ರೈಸಸ್ ನಲ್ಲಿ ಇಂದೂ ಮತ್ತೆ ಶೋಧ ಮುಂದುವರೆದಿದೆ. ಬೆಳ್ಳಂಬೆಳಗ್ಗೆ ಕಚೇರಿಗೆ ಐಟಿ ಅಧಿಕಾರಿಗಳು ಆಗಮಿಸಿ, ಶೋಧ ಕಾರ್ಯ ಆರಂಭಿಸಿದರು. ಸತತ ಮೂರನೇ ದಿನವೂ ಸಿಮೆಂಟ್ ಮತ್ತು ಸ್ಟೀಲ್ ಡೀಲರ್ ಕಚೇರಿಯಲ್ಲಿ ಶೋಧ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More News

You cannot copy content of this page