ಬೆಂಗಳೂರು : ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಲು ಇದುವರೆಗೂ ತೆರೆಮರೆಯಲ್ಲಿ ನಡೆಯುತ್ತಿದ್ದ ಸಂಘರ್ಷ ಈಗ ಬಹಿರಂಗಗೊಂಡಿದೆ. ಸಚಿವರುಗಳಾದ ಆರ್ ಅಶೋಕ್ ಮತ್ತು ವಿ ಸೋಮಣ್ಣ ನಡುವಿನ ಕುಸ್ತಿ ಬಹಿರಂಗಗೊಂಡಿದ್ದು, ಬೆಂಗಳೂರು ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಿ ಎಂದು ಸೋಮಣ್ಣ ಸಲಹೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ ಸೋಮಣ್ಣ, ಸಚಿವ ಆರ್ ಅಶೋಕ್ ವಿರುದ್ಧ ಗುಡುಗಿದರಲ್ಲದೆ, ತಮ್ಮ ಆಕ್ರೋಶವನ್ನ ಹೊರಹಾಕಿದರು. ನಾನು ಸಚಿವನಾದ್ದಾಗ ಅಶೋಕ್ ಇನ್ನೂ ಎಂಎಲ್ಎನೂ ಆಗಿರಲಿಲ್ಲ, ಈಗ ನನಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಸಭೆ ಕರೆದಿದ್ದೆ ಅಶೋಕ್ ಬಂದಿರಲಿಲ್ಲ, ನಾನ್ ಏನ್ ಮಾಡ್ಲಿ, ಅವರು ಸಭೆ ಕರೆದ್ರೆ ನಾನು ಹೋಗಲಿಕ್ಕೆ ಆಗುತ್ತಾ ಎಂದು ಮರುಪ್ರಶ್ನಿಸಿದರು. ನಾನು ಸಭೆ ಕರೆದ್ರೆ ಅವರು ಬರಬೇಕು, ಇಲ್ಲ ಅಂದ್ರೆ ಅವರಿಗೆ ಲಾಸ್, ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಶೋಕ್ ಅವರಿಗೆ ಸಾಮ್ರಾಟ್ ಅಂತಾನೂ ಕರೆಯುತ್ತಾರೆ. ಅವರ ಅಪ್ಪ ಅಮ್ಮ ಯಾಕೆ ಅಶೋಕ ಅಂತಾ ಹೆಸರಿಟ್ರೋ ಗೊತ್ತಿಲ್ಲ, ಅವನು ಸಾಮ್ರಾಟ್ ತರಾನೇ ಅಡ್ತಾನೆ ಎಂದು ಅಶೋಕ್ ನನ್ನು ಲೇವಡಿ ಮಾಡಿದರು. ಈ ಬಿಕ್ಕಟ್ಟನ್ನು ಬಗೆಹರಿಸಲು ವಿ ಸೋಮಣ್ಣ ಅವರು ಹೊಸ ಪ್ರಸ್ತಾಪವನ್ನು ಸಿಎಂ ಮುಂದಿಟ್ಟರು.
ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊಣೆ ವಿಭಜನೆ ಮಾಡಿ, ಇಬ್ಬರು ಉಸ್ತುವಾರಿಗಳನ್ನಾಗಿ ಮಾಡಲಿ ಎಂದು ಸಲಹೆ ನೀಡಿದರು. ನನಗರ್ಧ ಬೆಂಗಳೂರು, ಅಶೋಕ್ ಗೆ ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ ವಿ ಸೋಮಣ್ಣ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಜಿಲ್ಲಾ ಉಸ್ತುವಾರಿ ನೀಡುವಾಗ ಹಿರಿತನ ಆಧಾರದ ಮೇಲೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸೋಮಣ್ಣ ಮನವಿ ಮಾಡಿದರು. ನಾನು ಬೆಂಗಳೂರಿನ ಹಿರಿಯ ಸಚಿವ, ನನ್ನನ್ನು ಪರಿಗಣಿಸಿ ಎಂದು ಸಿಎಂಗೆ ಕೇಳಿದೀನಿ ಎಂದು ವಿ ಸೋಮಣ್ಣ ಹೇಳಿದರು.
ಬೆಂಗಳೂರು ಉಸ್ತುವಾರಿ ಯಾರು ಎಂದು ಇನ್ನೂ ನೇಮಕ ಮಾಡಿಲ್ಲ, ಕೋವಿಡ್ ನಿರ್ವಹಣೆಗೆ ಅಶೋಕ್ ಅವರನ್ನ ನೇಮಿಸಿದ್ದಾರೆ ಹೊರತು ಉಸ್ತುವಾರಿ ನೇಮಕ ಮಾಡಿಲ್ಲ, ಪಾಟ್ ಹೋಲ್ ಬಗ್ಗೆ ಅಶೋಕ್ ಯಾಕೆ ಸಭೆ ಮಾಡಿದ್ರು ಅಂತ ಅವರನ್ನೇ ಕೇಳಿ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಕೇಳಿದ ಸಚಿವ ಸೋಮಣ್ಣ.
ಸಚಿವ ಆರ್ ಅಶೋಕ್ ಪ್ರತಿಕ್ರಿಯೆ
ಬೆಂಗಳೂರು ನಗರ ಉಸ್ತುವಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮಾಡುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಈತನಕ ನಾನು ಇದೇ ಜಿಲ್ಲೆಯ ಉಸ್ತುವಾರಿ ಬೇಕೆಂದು ಕೇಳಿಲ್ಲ. ಸಿಎಂ ಸೇರಿದಂತೆ ಯಾರ ಹತ್ತಿರವೂ ಬೇಡಿಕೆ ಇಟ್ಟಿಲ್ಲ. ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟಿದ್ದರು. ಉತ್ತಮವಾಗಿ ಕೆಲಸ ಮಾಡಿದ್ದೇನೆ. ನಂತರ ಎಂ ಟಿ ಬಿ ನಾಗರಾಜ್ ನನಗೆ ಬೇಕು ಎಂದು ಕೇಳಿದಾಗ ಗ್ರಾಮಾಂತರ ಉಸ್ತುವಾರಿಯನ್ನು ಎಂಟಿಬಿ ಅವರಿಗೆ ಬಿಟ್ಟುಕೊಟ್ಟೆ. ಉಸ್ತುವಾರಿ ಮಂತ್ರಿ ಆಗದೆ ಕೂಡ ಕೆಲಸ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ ಅಶೋಕ್, ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದರಿಂದ ಸಚಿವರು ಕರೆದಿದ್ದ ಶಾಸಕರ ಸಭೆಗೆ ಭಾಗವಹಿಸಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ಉಸ್ತುವಾರಿ ವಿಷಯದಲ್ಲಿ ಅಂತಿಮವಾಗಿ ಸಿಎಂ ಬೊಮ್ಮಾಯಿ ನಿರ್ಧಾರಕ್ಕೆ ನಾನು ಬದ್ಧ. ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ಟರೂ ಅವರ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಅಶೋಕ ಸ್ಪಷ್ಟಪಡಿಸಿದರು.