ಬೆಂಗಳೂರು : ರೈತ ವಿರೋಧಿ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಲಿ ಪಡೆದ ಆಶಿಶ್ ಮಿಶ್ರಾನ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಇಂದು ಮೌನ ಪ್ರತಿಭಟನೆ ನಡೆಸಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಭವನದಲ್ಲಿ ಪ್ರತಿಭಟನೆ ನಡೆಯಿತು. ರೈತರ ಪ್ರಾಣಕ್ಕೆ ಕಂಟಕವಾಗಿರುವ ಬಿಜೆಪಿ ಸರ್ಕಾರದ ಕೃಷಿ ಕಾನೂನುಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಅನ್ನದಾತರ ಜೀವ ಬಲಿ ಪಡೆಯುತ್ತಿರುವ ಬಿಜೆಪಿ ಸರ್ಕಾರ ಮತ್ತು ಆ ಪಕ್ಷದ ನಾಯಕರಿಗೆ, ಹುತಾತ್ಮರಾದ ರೈತರ ಬಗ್ಗೆ ಕರುಣೆ, ಕನಿಕರ, ಕಾಳಜಿ ಇಲ್ಲವಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ವಿಶ್ರಾ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡುವಂತೆ ಹಾಗೂ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರನ್ನು ನೆನೆದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯಿಂದ ಮೌನವಾಗಿಯೇ, ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿತು.