ಬೆಂಗಳೂರು ಉಸ್ತುವಾರಿ ಲಾಭದಾಯಕ, ಅದಕ್ಕಾಗಿ ಸಚಿವರಿಬ್ಬರ ಕಿತ್ತಾಟ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೇಶಭಕ್ತರ ಸರ್ಕಾರ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕಾಗಿ ಕಿತ್ತಾಟ ನಡೆಸುತ್ತಿದೆ.ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರು ನಗರದ ಉಸ್ತಾವಾರಿಗಾಗಿ ಸಚಿವ ವಿ.ಸೋಮಣ್ಣ ಮತ್ತು ಸಚಿವ ಆರ್ .ಅಶೋಕ್ ನಡುವೆ ಇದುವರೆಗೂ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಯಲಾಗಿದೆ. ಸಾರ್ವಜನಿಕವಾಗಿ ಉಸ್ತುವಾರಿ ತಮಗೆ ಬೇಕು ಎಂದು ಗುದ್ದಾಟ ನಡೆಸುತ್ತಿದ್ದಾರೆ. ಇದು ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷ ಎಂದು ಲೇವಡಿ ಮಾಡಿದರು.


ಜಿ.ಎಸ್.ಟಿ ಪರಿಹಾರ ನೀಡಬೇಕು,ಇದು ನಮ್ಮ ತೆರಿಗೆ ಪಾಲಿನ ಹಣ, ಇದನ್ನು ರಾಜ್ಯ ಸರ್ಕಾರ ಗಟ್ಟಿಧ್ವನಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕೇಳಬೇಕು. ಇದೇನು ಭಿಕ್ಷೆಯಲ್ಲ,ನಮ್ಮ ಹಕ್ಕು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಪೆಟ್ರೋಲ್,ಡೀಸೆಲ್,ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ.ತಮಿಳುನಾಡಿನ ಸ್ಟಾಲಿನ್ ಸರ್ಕಾರ ಮೂರು ರೂಪಾಯಿ ತೆರಿಗೆ ಕಡಿಮೆ ಮಾಡಿದೆ, ನಮ್ಮ ರಾಜ್ಯದಲ್ಲಿ ಕನಿಷ್ಟ ಹತ್ತು ರೂಪಾಯಿ ಕಡಿಮೆ ಮಾಡಬೇಕು.ಆಗ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.


ಅದರ ಜತೆಯಲ್ಲಿಯೇ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಕಳೆದ ಏಳು ವರ್ಷದಲ್ಲಿ ಪೆಟ್ರೋಲ್,ಡೀಸೆಲ್ ಮೇಲಿನ ಅಬಕಾರಿ ಸುಂಕ ಒಂದರಿಂದಲೇ ಕೇಂದ್ರ ಸರ್ಕಾರಕ್ಕೆ 23 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಕರ್ನಾಟಕವೊಂದರಿಂದಲೇ 1.20 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.ಬಡವರ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿಯವರು ತೆರಿಗೆ ಕಡಿತ ಮಾಡಿ ಜನರಿಗೆ ಸಹಾಯ ಮಾಡಲಿ ಎಂದು ಸವಾಲು ಹಾಕಿದರು.


ಮನಮೋಹನ್ ಸಿಂಗ್ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ ಅಬಕಾರಿ ತೆರಿಗೆ ಇತ್ತು,ಈಗ ಅದು 31 ರೂಪಾಯಿ 84 ಪೈಸೆ ಆಗಿದೆ.ಪೆಟ್ರೋಲ್ ಮೇಲೆ 9 ರೂಪಾಯಿ 21 ಪೈಸೆ ತೆರಿಗೆ ಇತ್ತು ಇತ್ತು,ಈಗ 32 ರೂಪಾಯಿ 98 ಪೈಸೆಗೆ ಏರಿದೆ.ಇದರಲ್ಲಿ ಕನಿಷ್ಟ 50% ಕಡಿಮೆ ಮಾಡಲಿ. ಇದನ್ನೇ ನಾನು ಕ್ರಿಮಿನಲ್ ಲೂಟಿ ಎಂದು ಕರೆದಿದ್ದು ಎಂದು ತಿಳಿಸಿದರು.


ಕೊವಿಡ್ ಗೂ ಪೆಟ್ರೋಲ್ ಬೆಲೆ ಏರಿಕೆಗೂ ಸಂಬಂಧ ಏನು? ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಬಡ ಜನರ ರಕ್ತ ಕುಡಿಯುವುದು ಸರಿನಾ? ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ಮಾಡಲಿ.ಕೊರೊನಾ ಇದ್ದರೂ ಅದಾನಿ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ.ಬಡವರ ಬದುಕು ಬೀದಿಗೆ ಬರುತ್ತಿದೆ.ಹೀಗಿದ್ದಾಗ ಯಾರ ಮೇಲೆ ತೆರಿಗೆ ಹೆಚ್ಚು ಮಾಡಬೇಕು ಅಂತ ಸರ್ಕಾರಕ್ಕೆ ಗೊತ್ತಾಗಲ್ವಾ? ಅದಾನಿ,ಅಂಬಾನಿ ಬೆಳೆಯಬೇಕು,ಬಡವರು ಸಾಯಬೇಕು,ಇದು ಬಿಜೆಪಿ ಅವರ ನೀತಿಯಾಗಿದೆ ಎಂದು ಆರೋಪಿಸಿದರು.

ಯಡಿಯೂರಪ್ಪ ಅವರ ಮೇಲೆ ನನಗೆ ಪ್ರೀತಿಯಾಗಲಿ,ದ್ವೇಷವಾಗಲಿ ಇಲ್ಲ.ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದರೆ ಸುಧಾಕರ್ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಎಂಬುದನ್ನು ಬಹುಕಾಲದಿಂದ ಹೇಳುತ್ತಾ ಬಂದಿದ್ದೇನೆ. ಈಗಲೂ ಆದಷ್ಟು ಬೇಗ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಕೋರುತ್ತೇನೆ.


ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ : ಎಐಸಿಸಿ ಆದ್ಯಕ್ಷೆ ಸೋನಿಯಾಗಾಂಧಿ ಅವರನ್ನು ಇತ್ತೀಚೆಗೆ ಭೇಟಿಯಾದಾಗ ರಾಷ್ಟ್ರ ರಾಜಕಾರಣದ ವಿಷಯ ಚರ್ಚೆಗೇ ಬಂದಿಲ್ಲ. ಆದರೂ ಕೆಲ ಪತ್ರಿಕೆಗಳಲ್ಲಿ ಕಲ್ಪಿತ ವರದಿಗಳು ಪ್ರಸಾರವಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರ ರಾಜಕಾರಣಕ್ಕೆ ‌ಬರುವಂತೆ ನನಗೆ ಅವರು ಆಹ್ವಾನವನ್ನೇ ನೀಡಿಲ್ಲ.‌ ಆ ವಿಷಯದ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಆದರೂ ಅವರಿಗೆ ಈ ವಿಷಯದ ಬಗ್ಗೆ ಬೇಜಾರಾಗಿದೆ ಎಂದರೆ ಯಾವ ರೀತಿ ಸ್ಪಷ್ಟನೆ ಕೊಡಬೇಕು? ಎಂದು ಪತ್ರಕರ್ತರಿಗೆ ಮರುಪ್ರಶ್ನಿಸಿದರು.

ಚರ್ಚೆಯಾಗಿದ್ದರೆ ತಾನೇ ಮನಸ್ತಾಪ ಮೂಡೋದು? ಇಷ್ಟು ಸ್ಪಷ್ಟವಾಗಿ ಹೇಳಿದ್ದರೂ ಪತ್ರಿಕೆಗಳಲ್ಲಿ ಈ ವಿಚಾರದ ಬಗ್ಗೆ ಕಲ್ಪಿತ ವರದಿಗಳು ಬರುತ್ತಿವೆ ಎಂದರೆ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಮರೆತಿವೆ ಎಂಬುದಾಗಿ ಹೇಳಬೇಕಾಗುತ್ತದೆ‌ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ವಿದ್ಯುತ್ ಖಾಸಗೀಕರಣವಾದರೆ ಉಗ್ರ ಹೋರಾಟ : ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು, ಕರ್ನಾಟಕದಲ್ಲಿ ಈವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ಉಗ್ರ ರೀತಿಯಲ್ಲಿ ಖಂಡಿಸಲಾಗುವುದು ಎಂದು ತಿಳಿಸಿದರು.


ವಿದ್ಯುತ್ ಘಟಕಗಳನ್ನು ಖಾಸಗೀಕರಣ ಮಾಡಬಾರದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

More News

You cannot copy content of this page