ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗೆ ಕ್ರಮ : ಸಚಿವ ಸಿ.ಸಿ.ಪಾಟೀಲರಿಂದ ಗಡುವು

ಬೆಂಗಳೂರು : ರಾಜ್ಯದ ಕೆಲವೆಡೆ ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಿರುವುದು ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಾಲಮಿತಿಯೊಳಗೆ ತುರ್ತಾಗಿ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾಧಿಕಾರಿಗಳಿಗೆ ಗಡುವು ನೀಡಿದರು.
ವಿಕಾಸಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೊಂಡಿರುವ ಕೆಲಸ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈ ಬಾರಿ ಮಳೆಯ ಪರಿಣಾಮದಿಂದಾಗಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಹಲವು ಹೆದ್ದಾರಿಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಹೆದ್ದಾರಿ ನಿರ್ವಹಿಸುವ ಅಧಿಕಾರಿಗಳು ತಕ್ಷಣ ಖುದ್ದಾಗಿ ಸ್ಥಳಪರಿಶೀಲನೆ ನಡೆಸಿ ಹೆದ್ದಾರಿಯ ಗುಣಮಟ್ಟವನ್ನು ಉತ್ತಮವಾಗಿ ಕಾಯ್ದುಕೊಂಡು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕು, ಇದಕ್ಕೆ ಅಗತ್ಯ ಸಹಕಾರವನ್ನು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.


ಅನೇಕ ಕಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳ (Road humps)ನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮತ್ತು ಇತರ ರಸ್ತೆಗಳಲ್ಲಿ ನಿರ್ಮಿಸಿರುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ ಮತ್ತು ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳಿಂದ ವ್ಯಾಪಕವಾಗಿ ದೂರುಗಳು ವ್ಯಕ್ತವಾಗಿವೆ. ಇವುಗಳನ್ನು ಪರಿಶೀಲಿಸಿ ಮತ್ತು ಸ್ಥಳೀಯರನ್ನು ಮನವೊಲಿಸಿ ಅವೈಜ್ಞಾನಿಕ ರೋಡ್ ಹಂಪ್ ಗಳನ್ನು ತೆಗೆದು ಹಾಕುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಸಿ.ಸಿ.ಪಾಟೀಲರು ಸೂಚಿಸಿದರು.
ರಾಜ್ಯದ ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಇಂತಹ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಗುತ್ತಿಗೆದಾರರಿಂದ ವಿಳಂಬವಾದಲ್ಲಿ ಅವರಿಗೆ ನೋಟೀಸ್ ನೀಡಿ, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಸಂಸ್ಥೆಗಳು ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಿರ್ಲಕ್ಷ್ಯ ತೋರುತ್ತಿವೆ ಮತ್ತು ವಾಹನ ಸವಾರರಿಗೆ ಕಿರುಕುಳ ನೀಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುಂದೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.


ಹಾಸನ-ಮಂಗಳೂರು, ಬೆಂಗಳೂರು-ಬಿ.ಆರ್.ಹಿಲ್ಸ್, ಬೆಂಗಳೂರು-ಕನಕಪುರ ಹೆದ್ದಾರಿ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ಬಗ್ಗೆ ಸಚಿವರು ಅತೃಪ್ತಿ ವ್ಯಕ್ತಪಡಿಸಿ, ಈ ಕಾಮಗಾರಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಆದಷ್ಟು ಶೀಘ್ರವಾಗಿ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂದು ಅವರು ಸೂಚಿಸಿದರು.
ಹೆದ್ದಾರಿ ದುರಸ್ತಿ ಕಾರ್ಯವೊಂದೇ ಮುಖ್ಯವಲ್ಲ, ಹೆದ್ದಾರಿ ಅಕ್ಕ-ಪಕ್ಕದ ಹಳ್ಳಿಗಳಿಗೆ ಮತ್ತು ಪೇಟೆ-ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ವರ್ತುಲ ರಸ್ತೆಗಳ ಕಾಮಗಾರಿಗಳನ್ನು ವಿಳಂಬ ಮಾಡಿದರೆ ಆಯಾ ಪ್ರದೇಶಗಳ ನಗರಗಳ ಒಳಭಾಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಸಿ.ಸಿ.ಪಾಟೀಲರು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಕಾರ್ಯದರ್ಶಿ ಕೃಷ್ಣಾರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

More News

You cannot copy content of this page