ಬೆಂಗಳೂರು: ಆರೋಗ್ಯಇಲಾಖೆ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಶಾಲೆಗಳ ಆರಂಭದ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾರಂಭದ ಬಗ್ಗೆ ತಜ್ಞರ ಜತೆ ಚರ್ಚಿಸಿ ಸಿಎಂ ದಿನಾಂಕ ನಿಗಧಿ ಪಡಿಸಲಿದ್ದಾರೆ ಎಂದು ತಿಳಿಸಿದರು. ದಸರಾ ಬಳಿಕ ಶಾಲೆಗಳು ಆರಂಭವಾಗುವ ಸಾಧ್ಯತೆಗಳಿವೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕೋವಿಡ್-19 ಅಲೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಕೋವಿಡ್ ಇಳಿದಿದೆ ಅಂತ ನಾನು ಹೇಳೋದಿಲ್ಲ, ಕೋವಿಡ್ ಒಂದು ರಾಜ್ಯಕ್ಕೆ, ಒಂದು ದೇಶಕ್ಕೆ ಸೀಮಿತವಾಗಿಲ್ಲ, ಇದೊಂದು ವಿಶ್ವಕ್ಕೆ ಬಂದಿರುವ ಸಾಂಕ್ರಾಮಿಕ ರೋಗ, ವಿಶ್ವದಿಂದ ಸಂಪೂರ್ಣವಾಗಿ ಕೋವಿಡ್ ಹೊರ ಹಾಕುವವರೆಗೂ ಕೊವಿಡ್ ಮುಕ್ತ ಅಂತ ಹೇಳೋದಿಕ್ಕಾಗಲ್ಲ ಎಂದು ತಿಳಿಸಿದರು.
ನಮ್ಮ ರಾಜ್ಯ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗಾಗಿ ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ, ರಾಜ್ಯದಲ್ಲಿ ಶೇ.83 ರಷ್ಟು ಲಸಿಕೆ ನೀಡಲಾಗಿದೆ, ಶೇ.38 ಎರಡನೇ ಡೋಸ್ ನೀಡಲಾಗಿದೆ, ಅನೇಕರಲ್ಲಿ ರೋಗ ನಿರೋಧಕ ಶಕ್ತಿ ಬಂದಿದೆ, ಗಡಿ ಭಾಗದ ಕೇರಳ, ಮಹಾರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಾಗಿದ್ರೂ ನಮ್ಮಲ್ಲಿ ಇಳಿಯಲು ಇದೇ ಕಾರಣ ಎಂದು ತಿಳಿಸಿದರು.