ರಾಜ್ಯದ ಕರಾವಳಿಯಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗಿರುವ ನಿರ್ಬಂಧ ಶೀಘ್ರ ತೆರವು : ಸಿಎಂ

ಉಡುಪಿ : ರಾಜ್ಯದ ಕರಾವಳಿ ದಂಡೆಯಿಂದ ೫೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಡೆಸದಂತೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕುಂತಲ ನಗರದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘ ಆಯೋಜಿಸಿದ್ದ ಕನ್ವೆನ್ಷನ್ ಸೆಂಟರ್ ಮತ್ತು ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಉದ್ಯಮಿಗಳೊಂದಿಗೆ ನಡೆಸಿದ ಚಾಯ್ ಪೆ ಚರ್ಚಾ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.


ನಮ್ಮ ಪಕ್ಕದ ರಾಜ್ಯಗಳಾದ ಕೇರಳ ಮತ್ತು ಗೋವಾದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗದೆ. ಆ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಎಷ್ಟು ಸದ್ಬಳಕೆ ಮಾಡಿಕೊಳ್ಳಬೇಕಿತ್ತೋ ಅಷ್ಟು ಆಗಿಲ್ಲ ಎಂದು ಅವರು ವಿಷಾದಿಸಿದರು.


ಕರಾವಳಿ ದಂಡೆಯಿಂದ ೫೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಸದಂತೆ ನಿರ್ಬಂಧ ಹಾಕಿರುವ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿದೆ. ಇದರಿಂದ ಪ್ರವಾಸೋದ್ಯಮ ಉತ್ತೇಜನಕ್ಕೆ ಅಡ್ಡಿಯಾಗುತ್ತದೆ ಎಂಬ ಆರೋಪವೂ ಇದೆ. ಹೀಗಾಗಿ ಈ ಕಾನೂನನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


‍ರಾಜ್ಯಸರ್ಕಾರ ರೂಪಿಸುತ್ತಿರುವ ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ, ಉದ್ಯೋಗ ಪ್ರೋತ್ಸಾಹ ನೀತಿಯನ್ನು ಜಾರಿಗೊಳಿಸಿ ಯುವ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಪೂರಕವಾದ ವಾತಾವರಣ ಸೃಷ್ಟಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

More News

You cannot copy content of this page