ರಾಜಕಾರಣದಲ್ಲಿ ಚಪ್ಪಾಳೆ, ಕಲ್ಲು, ಮೊಟ್ಟೆ ಹೊಡೆಯುವವರು, ಧಿಕ್ಕಾರ, ಜೈಕಾರ ಕೂಗುವವರು ಇದ್ದಾರೆ: ಡಿ ಕೆ ಶಿವಕುಮಾರ್

ಬೆಂಗಳೂರು : ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಪಕ್ಷದಲ್ಲಿ ಶಿಸ್ತು ಕಾಪಾಡಲು ಯಾವ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಭಾಷಣೆಗೂ ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ ಅವರು ಅವರು ಮಾತನಾಡಿಲ್ಲ ಎಂದು ನಾನು ಹೇಳಲು ಹೋಗುವುದಿಲ್ಲ. ನೀವು ತೋರಿಸಿರುವುದು ನಿಜ. ಆದರೆ ಅದು ಇಬ್ಬರ ನಡುವಣ ಆಂತರಿಕ ಮಾತುಕತೆ. ಅಧಿಕೃತ ಹೇಳಿಕೆ ಅಲ್ಲ. ಈ ಬಗ್ಗೆ ಉಗ್ರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.
ನಾನು ಮಾಧ್ಯಮಗಳ ತಪ್ಪು ಎಂದು ಯಾಕೆ ಹೇಳಲಿ? ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅದೇ ರೀತಿ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿರುವುದದ್ದನ್ನೂ ತೋರಿಸಿದ್ದೀರಿ. ಅದೇ ರೀತಿ ಈಗ ತೋರಿಸಿದ್ದೀರಿ. ಆದರೆ ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬುದು ನನ್ನ ಸ್ಪಷ್ಟವಾದ ಮಾತು ಎಂದರು.


ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಕಲ್ಲು ಎಸೆಯುವವರು, ಮೊಟ್ಟೆ ಹೊಡೆಯುವವರು, ಧಿಕ್ಕಾರ ಕೂಗುವವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಗಳವೂ ಇಲ್ಲ. ಗುಂಪುಗಳೂ ಇಲ್ಲ. ಈಗಿನ ಮಾತುಕತೆಗೆ ಸಂಬಂಧಿಸಿದಂತೆ ಕೆ. ರೆಹಮಾನ್ ಖಾನ್ ಅವರ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿಯು ಅದರ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಗೃಹ ಸಚಿವರು ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಸುಮೋಟೋ ಕೇಸ್ ದಾಖಲಿಸಿದರೂ ಒಳ್ಳೆಯದೇ ಎಂದ ಡಿಕೆ ಶಿವಕುಮಾರ್, ಈಗಿನ ಮಾತುಕತೆಯಿಂದ ಪಕ್ಷಕ್ಕೆ ಖಂಡಿತ ಮುಜುಗರ ಆಗಿದೆ. ನಾನು ಇಲ್ಲ ಎಂದು ಹೇಳುವುದಿಲ್ಲ ಎಂದರು.


ನಾನು ಯಾವುದೇ ಗುಂಪುಗಾರಿಕೆಗೆ ಸೇರಿಲ್ಲ. ಅದನ್ನು ಮಾಡುವುದೂ ಇಲ್ಲ. ಪೋಷಿಸುವುದೂ ಇಲ್ಲ. ಗುಂಪುಗಾರಿಕೆ ಮಾಡಲು ನಾನು ಹುಟ್ಟಿಲ್ಲ. ನನಗೆ ಪಕ್ಷ ಮುಖ್ಯ,, ಪರ್ಸೆಂಟೇಜ್ ಬಗ್ಗೆ ನಮ್ಮ ಪಕ್ಷದಲ್ಲಿ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಬಿಜೆಪಿ ನಾಯಕರ 30 % ಕಮಿಷನ್ ಬಗ್ಗೆ ಎಚ್. ವಿಶ್ವನಾಥ್ ಅವರು ಮಾತನಾಡಿದ್ದಾರೆ ಎಂದು ಟಿಕೀಸಿದರು.
ಮಾಜಿ ಸಚಿವರೊಬ್ಬರು ಬೆಡ್ ರೂಮಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗ ಅವರ ಬಳಿ ಹೋಗಿ ಯಾಕೆ ಪ್ರಶ್ನೆ ಮಾಡಲಿಲ್ಲ? ನನ್ನ ವಿರುದ್ಧ ಪಕ್ಷದೊಳಗೆ ಯಾವ ಷಡ್ಯಂತ್ರವೂ ಇಲ್ಲ. ಅದಕ್ಕೆ ನಾನು ಹೆದರುವುದೂ ಇಲ್ಲ. ನಾನು ಹಳ್ಳಿಯಿಂದ ಬಂದವನಾಗಿದ್ದು, ನನಗೆ ನನ್ನದೇ ಆದ ನಡೆ, ನುಡಿ, ದೇಹಭಾಷೆ, ವ್ಯಕ್ತಿತ್ವ ಹಾಗೂ ಯಶಸ್ಸು ಇದೆ. ಕೆಲವೊಂದು ಗುಣಗಳು ಬದಲಾಗುವುದಿಲ್ಲ ಎಂದರು.
ನನ್ನ ಕೆಲಸಕ್ಕೆ ತಕ್ಕಡಿ ಹಿಡಿಯುವುದು ಮತದಾರ ಹಾಗೂ ಜನ ಮಾತ್ರ. ಪಕ್ಷದ ಅಧ್ಯಕ್ಷರಾಗಿದ್ದಾಗ, ಸರಕಾರಗಳು ಇದ್ದಾಗ ಅವುಗಳ ತಕ್ಕಡಿ ತೂಕ ಏನು ಎಂದು ಗೊತ್ತಾಗುವುದು ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದ ನಂತರವಷ್ಟೇ, ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಇದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಹಾಗೆಯೇ ನಾವು ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಬಿಜೆಪಿ ಸರ್ಕಾರ ಹುಟ್ಟಿರುವುದು ಹಾಗೂ ಬದುಕಿರುವುದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರದಲ್ಲಿ ಈ ಸರಕಾರವನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

More News

You cannot copy content of this page