ದುಬೈ : ಐಪಿಎಲ್ 14 ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈಸೂಪರ್ ಕಿಂಗ್ಸ್ ನಾಲ್ಕನೇ ಐಪಿಎಲ್ ಪ್ರಶಸ್ತಿಯಾಗಿದೆ.
ದುಬೈ ಅಂತರಾಷ್ಟ್ರೀಯಕ್ರಿಕೆಟ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಇಯಾನ್ ಮಾರ್ಗನ್ ತಂಡವನ್ನು 27 ರನ್ ಗಳಿಂದ ಮಹೇಂದ್ರಸಿಂಗ್ ಧೋನಿ ನೇತೃತ್ವದ ತಂಡ ಸೋಲುಣಿಸಿತು. ಬೌಲರ್ ಗಳ ಲಯಬದ್ದ ಬೌಲಿಂಗ್ ಮತ್ತು ಆರಂಭಿಕ ಬ್ಯಾಟರ್ ಫಫ್ ಡುಪ್ಲಿಸಿ ಅವರ ಅಮೋಘ ಬ್ಯಾಟಿಂಗ್ ನಿಂದ ಜಯ ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ಗಳ ಅದ್ಬುತ ಬ್ಯಾಟಿಂಗ್ ನಿಂದ 193 ರನ್ ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಲು ಕೆ ಕೆ ಆರ್ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ 165 ರನ್ ಗಳನ್ನಷ್ಟೇ ಬಾರಿಸಲು ಸಾಧ್ಯವಾಯಿತು.
ಶುಭಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಅವರ ಆರಂಭಿಕ ಜೋಡಿ ಉತ್ತಮ ಜೊತೆಯಾಟ ಆಡಿತ್ತು, ನಂತರ ಬಂದ ಬ್ಯಾಟರ್ ಗಳು ಕ್ರಿಸ್ ನಲ್ಲಿ ಇರಲು ತಿಣುಕಾಡಿದರು. ಆರು ಮಂದಿ ಬ್ಯಾಟರ್ ಗಳು ಎರಡಂಕಿಯನ್ನೂ ದಾಟಲಿಲ್ಲ. 200 ನೇ ಪಂದ್ಯವನ್ನಾಡಿದ ರವೀಂದ್ರ ಜಡೇಜ ಎರಡು ವಿಕೆಟ್ ಪಡೆದು ಎರಡುಕ್ಯಾಚ್ ಪಡೆದು ಯಶಸ್ವಿಯಾದರು.
ಟಿ-20 ಕ್ರಿಕೆಟ್ ಧೋನಿ ತ್ರಿಶತಕ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದಾಖಲೆ ಮಾಡಿದರು., ಟಿ-20 ಕ್ರಿಕೆಟ್ ನಲ್ಲಿ 300 ಪಂದ್ಯಗಳಿಗೆ ನಾಯಕತ್ವ ವಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು .

40 ವರ್ಷ ವಯಸ್ಸಿನ ಧೋನಿಗೆ ಐಪಿಎಲ್ ನಲ್ಲಿ ಇದು ಒಟ್ಟು 10 ನೇ ಫೈನಲ್ ಪಂದ್ಯವಾಗಿತ್ತು. ಧೋನಿ ಆರು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕರಾಗಿದ್ದರು. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಿಲ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಸ್ಮರಿಸಬಹುದು.