ಹಾವೇರಿ: ನಮಗೆ ದೊರೆತ ಸ್ಥಾನಮಾನವನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ ಮಹಾಸಭೆ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಅಗಲಿದ ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಅಗಲಿರುವ ಗಣ್ಯರ ಬದುಕು ನಮಗೆ ಆದರ್ಶಪ್ರಾಯ. ಅಖಿಲ ಭಾರತ ವೀರಶೈವ ಮಹಾಸಭೆ ಸಮಾಜಮುಖಿ ಕೆಲಸ ಮಾಡುತ್ತಿರುವ ಸಂಸ್ಥೆ. ಗೌರವ ಪೂರ್ವಕವಾಗಿ ಅತ್ಯಂತ ದುಃಖದಿಂದ ಅಗಲಿದವರನ್ನು ಸ್ಮರಿಸುತ್ತಿದ್ದೇನೆ ಎಂದರು.

ಸಿ.ಎಂ. ಉದಾಸಿಯವರು ನಾಲ್ಕು ದಶಕಗಳ ಕಾಲ ಸಾಮಾಜಿಕ ಕಾರ್ಯಗಳನ್ನ ಮಾಡಿ ಉತ್ತಮ ಹೆಸರು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರೈತರ ಜೊತೆ ನಿಂತು, ರೈತರ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಿದವರು ನಮ್ಮ ಜಿಲ್ಲೆಯಲ್ಲಿ ಯಾರಾದ್ರೂ ಇದ್ದರೆ ಅದು ದಿವಂಗತ ಸಿ.ಎಂ.ಉದಾಸಿಯವರು ಎಂದರು.
ರೈತರ ಬೆಳೆ ವಿಮೆಯನ್ನ ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ನಮಗೆಲ್ಲ ಹೇಳಿಕೊಟ್ಟವರು ದಿವಂಗತ ಉದಾಸಿ, ಇಡೀ ರಾಜ್ಯದಲ್ಲೇ ಹೆಚ್ಚು ಬೆಳೆ ವಿಮೆ ಪಡೆಯೋದು ಹಾನಗಲ್ ತಾಲೂಕಿನ ರೈತರು. ಉದಾಸಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಮಾತ್ರ ಅವರಿಗೆ ನಾವೂ ನಿಜವಾದ ಶ್ರದ್ದಾಂಜಲಿ ಸಲ್ಲಿಸಿದಂತೆ ಎಂದರು.
ದಿವಂಗತ ಡಾ.ಚಿತ್ತರಂಜನ್ ಕಲಕೋಟಿಯವರು ಶಾಸಕರಿದ್ದಾಗಲೂ ಕೂಡ ವೈದ್ಯಕೀಯ ವೃತ್ತಿ ಮಾಡಿ, ಅನೇಕ ಜನಬಡವರಿಗೆ ಹಣವಿಲ್ಲದೆ ಚಿಕಿತ್ಸೆ ನೀಡಿದವರು. ಅವರ ಕೆಲಸವನ್ನ ನೋಡಿ ಜನರೇ ಅವರನ್ನ ರಾಜಕೀಯಕ್ಕೆ ಕರೆದುಕೊಂಡು ಬಂದು ಆಯ್ಕೆ ಮಾಡಿದ್ದರು ಎಂದರು. ಅತ್ಯಂತ ಅಪರೂಪದ, ಮಾನವೀಯತೆವುಳ್ಳ ವೈದ್ಯರಾಗಿದ್ದರು ಎಂದು ಸ್ಮರಿಸಿದರು.
ದಿವಂಗತ ಮಾಜಿ ಶಾಸಕ ರಾಜಶೇಖರ ಸಿಂಧೂರ ಕೂಡ ರಾಜಕಾರಣಕ್ಕೆ ಬರಬೇಕೆಂದು ಬಯಸಿದವರಲ್ಲ. ಜನರೇ ಅವರನ್ನ ನಿಲ್ಲಿಸಿ, ಗೆಲ್ಲಿಸಿದರು. ತಮ್ಮ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಬದುಕಿದವರು ಸಿಂಧೂರ ಎಂದರು.

ಈಗಿನ ವ್ಯವಸ್ಥೆಯನ್ನ ನೋಡಿ, ಯಡಿಯೂರಪ್ಪನವರ ಮಾತಿಗೆ ಓಗೊಟ್ಟು ಅವರು ತಮ್ಮ ಸ್ಥಾನವನ್ನ ನನಗೆ ತೆರವು ಮಾಡಿಕೊಟ್ಟರು ಎಂದು ಮನ:ಪೂರ್ವಕವಾಗಿ ನೆನೆದರು. ಅಭಿಮಾನಪೂರ್ವಕವಾಗಿ ಸ್ಮರಿಸಿ, ಅವರ ಮಾರ್ಗದಲ್ಲಿ ನಡೆಯುವುದೇ ನಿಜವಾದ ಗೌರವ ಸಲ್ಲಿಸಿದಂತೆ ಎಂದರು.
ಬದುಕು ಹೇಗಿರಬೇಕು ಅಂದರೆ ಸ್ವಾಮಿ ವಿವೇಕಾನಂದರು ಹೇಳಿದಂತಿರಬೇಕು. ಸಾಧಕನಿಗೆ ಸಾವು ಅಂತ್ಯವಲ್ಲ. ಇತರರಿಗೆ ಪರೋಪಕಾರಿಯಾಗಿ ಬದುಕಬೇಕು. ಸಾವಿನ ನಂತರವೂ ಜನರು ನಮ್ಮನ್ನ ನೆನಪಿಡಬೇಕು ಎಂದ ಮುಖ್ಯಮಂತ್ರಿಗಳು, ಬಸವಣ್ಣನವರು ದಯವೇ ಧರ್ಮದ ಮೂಲ, ಕಾಯಕವೇ ಕೈಲಾಸ ಎಂದು ಹೇಳಿದರು.
ಕಾಯಕವಿಲ್ಲದೆ ಬದುಕು ಸಾಧ್ಯವಿಲ್ಲ. ದಿವಂಗತ ಮಹನೀಯರ ಆದರ್ಶಪ್ರಾಯ ಬದುಕಿನಂತೆ ನಾವೆಲ್ಲರೂ ಬದುಕೋಣ ಎಂದರು. ಸಚಿವ ಮುನಿರತ್ನ, ಶಾಸಕ ಅರವಿಂದ ಬೆಲ್ಲದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.