ಹುಬ್ಬಳ್ಳಿ: ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್, ಇದು ನಾನು ಹೇಳ್ತಾ ಇಲ್ಲ ಮಾಧ್ಯಮಗಳೇ ಇದನ್ನ ಹೇಳ್ತಾ ಇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡುವುದರ ಜತೆ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಪಕ್ಷವನ್ನೆ ಸಂಭಾಳಿಸಲು ಆಗುತ್ತಿಲ್ಲ, ಸೋನಿಯಾ ಗಾಂಧಿಗೂ ಆಗುತ್ತಿಲ್ಲ, ಇಂತವರು ನಮ್ಮ ಪ್ರಧಾನಿ ಬಗ್ಗೆ ಟೀಕೆ ಮಾಡ್ತಾರೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ನವರು ಪಕ್ಷ ಕಟ್ಟಲು ವಿಲವಿಲ ಒದ್ದಾಡುತ್ತಿದ್ದಾರೆ. ಇತಂಹವರು ನಮ್ಮ ಪ್ರಧಾನಿ ಬಗ್ಗೆ ಹೆಬ್ಬಟ್ಟು ಅಂತಾ ಟೀಕೆ ಮಾಡ್ತಾರೆ, ನಮ್ಮ ಪ್ರಧಾನಿ ೭ ವರ್ಷದ ಆಡಳಿತದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದಾರೆ, ಪಾಕಿಸ್ತಾನ ಹಾಗೂ ಚೀನಾಗೆ ಆಗಾಗ್ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಗುಣಗಾನ ಮಾಡಿದರು.
ವಿಧಾನ ಪರಿಷತ್ ಚುನಾವಣೆಗೆ ತಯಾರಿ ನಡೆಸಲು ಕರೆ
ಮುಂದಿನ ದಿನಗಳಲ್ಲಿ 29 ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಬೇಕಿದೆ, ಹೊಸ ಮತದಾರರ ಸೇರ್ಪಡೆ ಆಗಬೇಕಿದೆ, ಎಲ್ಲ ಕಡೆಯಲ್ಲಿ ಈ ಪ್ರಕ್ರಿಯೆ ನಡೆದಿದೆ, ಇನ್ನಷ್ಟು ಬಿರುಸಾಗಿ ಈ ಕೆಲಸ ನಡೆಯಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ರಾಜ್ಯದಲ್ಲಿ ಜೆ.ಡಿಎಸ್, ಕಾಂಗ್ರೆಸ್ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ, ಅವರಿಗೆ ಬಹುಸಂಖ್ಯಾತರ ವೋಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ, ಹೀಗಾಗಿ ಆರ್.ಎಸ್. ಎಸ್ ಗೆ ಬೈಯುವ ಕೆಲಸ ಮಾಡುತ್ತಿದ್ದಾರೆ, ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ್ರೆ, ಸಿದ್ದರಾಮಯ್ಯ ಸಾಬ್ ಕಾ ಸಾಥ್, ಸಾಬ್ ಕಾ ವಿಕಾಸ್ ಅಂತಿದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಮಾಜಿ ಸಂಸದ ಉಗ್ರಪ್ಪ ಅವರು ಜೀವಮಾನದಲ್ಲಿಯೇ ಹೀಗೆ ಮಾತನಾಡಿರಲಿಲ್ಲ, ಸಿದ್ದರಾಮಯ್ಯ ಮಾತಾನಾಡಿಸಿದ್ದರಿಂದ ಉಗ್ರಪ್ಪ ಮಾತನಾಡಿದ್ದಾರೆ, ಕಾಂಗ್ರೆಸ್ ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗಲ್ಲ, ಎರಡು ಹೋಳಾಗಿ ಹೋಗುತ್ತದೆ ಎಂದು ಆರೋಪಿಸಿದ ಕಟೀಲ್, ಜೆಡಿಎಸ್ ಕುಂಟುಂಬ ರಾಜಕೀಯ ಮಾಡುತ್ತ ಹಾಳಾಗಿದೆ, ಹೀಗಾಗಿ ಮುಂದಿನ ಚುನಾವಣೆಗೆ ಎರಡು ಪಕ್ಷ ಹೋಗುತ್ತವೆ, ಮತ್ತೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂಗ್ರೆಸ್ ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯಾರು, ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ. ಇಬ್ಬರ ನಡುವೆ ಅಧ್ಯಕ್ಷಗಿರಿಗೆ ಪೈಪೋಟಿ ನಡೆಯುತ್ತಿದೆ ಎಂದುಆರೋಪಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಡಿಕೆಶಿ ಬಿಡುತ್ತಿಲ್ಲ, ಡಿಕೆಶಿ ಮತ್ತು ಸಿದ್ದರಾಮಯ್ಯ ಜಗಳ ಮುಂದಿನ ಚುನಾವಣೆವರೆಗೂ ಮುಂದುವರೆಯತ್ತದೆ, ಆದ್ದರಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.