ವೈಯಕ್ತಿಕ ಟೀಕೆಯನ್ನ ಜೀರ್ಣಿಸಿಕೊಂಡಿದ್ದೇನೆ ಹೊರತು ಹೆದರುವುದಿಲ್ಲ: ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಹೆಚ್ ಡಿಕೆ

ಸಿಂಧಗಿ: ಈ ಚುನಾವಣೆಯಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಿಕ್ಕಿಲ್ಲ, ಆ ಪಕ್ಷವು ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ನಿರಾಧಾರ ಆರೋಪ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ ಪಕ್ಷದ ನಾಯಕ ಹೆಚ್.‌ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿಗಳು ಮೋರಟಗಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೆಡಿಎಸ್‌ ವಿರುದ್ಧ ಸುಖಾಸುಮ್ಮನೆ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು. “ಎಷ್ಟು ವರ್ಷ ಇದೇ ರೀತಿಯ ಸುಳ್ಳು ಹೇಳಲು ಸಾಧ್ಯ? ಕಳೆದ ಇಪ್ಪತ್ತು ವರ್ಷಗಳಿಂದ ಸಿಂಧಗಿ ಕ್ಷೇತ್ರದ ಜನರು ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಏನು? ನಾವು ಕೊಟ್ಟ ಕೊಡುಗೆ ಏನು? ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದರು.

ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೊದಲಿನಿಂದಲೂ ಮೂರನೇ ಸ್ಥಾನದಲ್ಲಿದೆ. ಅದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಯಾರ ಯಾರ ಕಾಲದಲ್ಲಿ ಈ ನಾಡಿನ ಅಭಿವೃದ್ಧಿಗೆ ಏನೆಲ್ಲ ಕೆಲಸ ಆಗಿದೆ ಎಂಬುದನ್ನು ಚರ್ಚೆ ನಡೆಸಲು ಮೂರೂ ಪಕ್ಷಗಳ ನಾಯಕರು ಒಂದೇ ವೇದಿಕೆಗೆ ಬರಲಿ. ಇದು ನನ್ನ ಸವಾಲು ಎಂದರು

.

ನಮ್ಮ ಪಕ್ಷ ಅಧಿಕಾರಿದಲ್ಲಿದ್ದ ಕಾಲದಲ್ಲಿ ರಾಜ್ಯದ ಅಭಿವೃದ್ಧಿಗೆ ಗುಣಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಮುಕ್ತ ಚರ್ಚೆಗೆ ನಾನು ಸಿದ್ಧ ಇದ್ದೇನೆ ಎಂದ ಅವರು, ನಾನು ಅಧಿಕಾರದಲ್ಲಿ ಇದ್ದಿದ್ದು ಒಮ್ಮೆ 18 ತಿಂಗಳು, ಇನ್ನೊಮ್ಮೆ 14 ತಿಂಗಳು ಮಾತ್ರ. ಇವರು ಐದೈದು ವರ್ಷ ಅಧಿಕಾರದಲ್ಲಿ ಇದ್ದರಲ್ಲಾ, ಏನೇನು ಸಾಧನೆ ಮಾಡಿದರು ಎಂದು ಹೇಳಲು ಬಹಿರಂಗ ಚರ್ಚೆಗೆ ಬರಲಿ ಎಂದು ನೇರ ಸವಾಲು ಹಾಕಿದರು.

ಜಮೀರ್‌ ಹರಕೆಯ ಕುರಿ ಎಂದಿದ್ದ ಸಿದ್ದರಾಮಯ್ಯ!

2004ರಲ್ಲಿ ಎಸ್.ಎಂ.ಕೃಷ್ಣ ಅವರು ರಾಜೀನಾಮೆ ನೀಡಿದ ನಂತರ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ನೀಡಿತು. ನಾವೇನು ಈಗ ಹೊಸದಾಗಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟಿದ್ದಲ್ಲ. ಮೊದಲಿನಿಂದಲೂ ಕೊಡುತ್ತಾ ಬಂದಿದ್ದೇವೆ. ಆಗ ಅದೇ ಅಭ್ಯರ್ಥಿ ಬಗ್ಗೆ ಮಾತನಾಡಿದ್ದ ಇದೇ ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರದಲ್ಲಿ ʼಹರಕೆಯ ಕುರಿʼಯನ್ನು ತಂದು ನಿಲ್ಲಿಸಿದ್ದಾರೆಂದು ಹೇಳಿದ್ದರು. ಈಗ ಅದೇ ಸಿದ್ದರಾಮಯ್ಯನವರು ಅದೇ ಹರಕೆಯ ಕುರಿಯನ್ನು ತಬ್ಬಿಕೊಂಡಿದ್ದಾರೆ ಎಂದು ಹೆಚ್‌ಡಿಕೆ ಕುಟುಕಿದರು.

ಆವತ್ತು ಬಸ್‌ ನಿಲ್ಲಿಸಿದ್ದೆವು, ಹತ್ತಿಕೊಂಡರು. ಆಮೇಲೆ ಮುಂದಿನ ನಿಲ್ದಾಣದಲ್ಲಿ ಇಳಿದುಹೋದರು ಎಂದು ಇದೇ ವೇಳೆ ಪರೋಕ್ಷವಾಗಿ ಜಮೀರ್‌ ಅಹಮದ್‌ʼಗೆ ಹೆಚ್‌ಡಿಕೆ ಟಾಂಗ್ ನೀಡಿದರು. ಜೆಡಿಎಸ್‌ ಪಕ್ಷ ಮುಗಿದು ಹೋಯಿತು ಎಂದು ಪದೇಪದೆ ಹೇಳಿದರೆ ಕೊನೆಗೆ ಮುಗಿದು ಹೋಗುವುದು ಕಾಂಗ್ರೆಸ್‌ ಪಕ್ಷವೇ. ಹಿಂದೆ ೨೦೧೮ರಲ್ಲಿ ಇದೇ ವ್ಯಕ್ತಿ ಅವರಪ್ಪನಾಣೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದರು. ಕೊನೆಗೆ ಏನಾಯಿತು? ಅವರೇ ನಮ್ಮ ಮನೆಗೆ ಬಾಗಿಲಿಗೆ ಬಂದು ನಿಂತುಕೊಂಡರು. ಇದನ್ನು ಅವರು ನೆನಪಿಸಿಕೊಳ್ಳಬೇಕು ಎಂದರು.

ಸಾಲ ಮನ್ನಾ ಮಾಡಲು ಸಹಕಾರ ನೀಡಲಿಲ್ಲ. ನಮ್ಮ ಭಾಗ್ಯಗಳು ನಿಲ್ಲಬಾರದು, ಸಾಲ ಮನ್ನಾಕ್ಕೆ ಹಣ ಹೊಂದಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು. ರೈತರ ಸಾಲ ನನಗೆ ಸಂಬಂಧವಿಲ್ಲ, ಅದು ನಿಮ್ಮ ಪಕ್ಷದ ಭರವಸೆ ಅಂದ್ರು. ಆದರೆ, ನಾನು ಕೊಟ್ಟ ಮಾತನ್ನು ಉಳಿಸಿಕೊಂಡೆ. ನನ್ನ 37 ಶಾಸಕರ ಬೆಂಬಲದಿಂದ ಅದು ಸಾಧ್ಯವಾಯಿತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸತ್ಯ ಕಹಿಯಾಗಿರುತ್ತದೆ

ಕುಮಾರಸ್ವಾಮಿ ಅವರು ಎಲ್ಲರದ್ದೂ ಬಿಚ್ಚಡಲಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ನಾನು ಅವರೆಲ್ಲರ ಜಾತಕ ತೆರೆದಿಟ್ಟರೆ ಅವರು ಹೊರಗೆ ಓಡಾಡೋಕೆ ಸಾಧ್ಯವೇ ಆಗಲ್ಲ. ಸತ್ಯ ಯಾವತ್ತೂ ಕಹಿಯಾಗಿರುತ್ತದೆ ಎಂದ ಅವರು ಎಚ್ಚರಿಕೆ ನೀಡಿದರು.

ನಾನು ನಿನ್ನೆಯೇ ಹೇಳಿದ್ದೇನೆ. ಜನಪರ ವಿಷಯ ಹಾಗೂ ಮಾಡಿರುವ ಸೇವಾ ಕಾರ್ಯಗಳನ್ನು ಇಟ್ಟುಕೊಂಡು ಚುನಾವಣೆ ನಡೆಸೋಣ ಎಂದು ಎಲ್ಲ ಪಕ್ಷಗಳಿಗೂ ಹೇಳಿದ್ದೇನೆ. ಹಾಗಂತ ನಾನು ಅಹಂಭಾವದಿಂದ ಹೇಳಲಾರೆ. ಆದರೆ, ಎಲ್ಲರ ಮನೆ ದೋಸೆ ತೂತೇ ಎನ್ನುವುದನ್ನು ಯಾರು ಮರೆಯಬಾರದು. ಎಚ್ಚರಿಕೆಯಿಂದ ಮಾತನಾಡಿ ಎಂದು ಹೇಳಿದ್ದೇನೆ ಎಂದರು.

ವೈಯಕ್ತಿಕ ಟೀಕೆ ಜೀರ್ಣಿಸಿಕೊಂಡಿದ್ದೇನೆ

ನಾನು ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡಿದೆ ಎನ್ನುವ ಕಾರಣಕ್ಕೆ ಕಳೆದ ಒಂದು ವಾರದಿಂದ ಕೆಲವರು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದರು. ಅದನ್ನೆಲ್ಲವನ್ನೂ ಜೀರ್ಣಿಸಿಕೊಂಡಿದ್ದೇನೆ ಹೊರತು ಹೆದರಿಲ್ಲ, ಈಗಲೂ ಹೆದರುವುದಿಲ್ಲ. ಆರ್‌ಎಸ್‌ಎಸ್‌ ಬಗ್ಗೆ ನಾನು ಹೇಳಿರುವುದು ಬರೀ ಆರೋಪವಲ್ಲ, ನನಗೆ ತಿಳಿದಿದ್ದು ಮತ್ತು ಓದಿದ್ದರಿಂದ ಗೊತ್ತಾಗಿದ್ದನ್ನು ಮಾತ್ರ ಹೇಳಿದ್ದೇನೆ.

ಕೇವಲ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶಕ್ಕೆ ನಾನು ಸಂಘದ ಬಗ್ಗೆ ಮಾತನಾಡಿಲ್ಲ. ವಿಷಯಾಧಾರಿತವಾಗಿ ಮಾತ್ರ ಚರ್ಚೆ ಮಾಡಿದ್ದೇನೆ. ಆದರೆ, ಕಾಂಗ್ರೆಸ್‌ ಪಕ್ಷದವರು ಮತಕ್ಕಾಗಿ ಮಾತ್ರ ಕೀಳು ಮಟ್ಟದ ಟೀಕೆ ಮಾಡುತ್ತಿದ್ದಾರೆ. ಅದು ಅವರ ಸಂಸ್ಕೃತಿ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ಇಬ್ರಾಹಿಂ ಅವರು ಬರ್ತಾರೆ

ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಎಲ್ಲರೂ ಹೇಳ್ತದ್ರಲ್ಲ, ಜೆಡಿಎಸ್‌ನಿಂದ ಗುಳೆ ಎದ್ದಿದೆ ಎಂದು. ಈಗ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರಲು ಗುಳೆ ಎದ್ದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾರ್ಮಿಕವಾಗಿ ಹೇಳಿದರು.

More News

You cannot copy content of this page