ಹುಬ್ಬಳ್ಳಿ : ಕಳೆದ ಸುಮಾರು ಹನ್ನೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನೆನಪು ರಾಜ್ಯ ಸರ್ಕಾರಕ್ಕೆ ಈಗ ಬಂದಿದೆ. 2011 ರಲ್ಲಿ ಆರಂಭವಾಗಿದ್ದ ಪ್ರಾಧಿಕಾರಕ್ಕೆ ಪ್ರಸ್ತುತ ವರ್ಷದಲ್ಲಿ 50 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಮೂಲಕ ಮತ್ತೆ ನೆನಪಾಗಿದೆ.
ಹುಬ್ಬಳ್ಳಿಯಲ್ಲಿ ಇಂದು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು 2011 ರಲ್ಲಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಮತ್ತೆ ಪ್ರಾರಂಭಿಸಲಾಯಿತು ಎಂದು ಹೇಳಿದರು.

ಕಿತ್ತೂರು ಚನ್ನಮ್ಮ ಪ್ರತಿಮೆಯನ್ನು ಬೆಳಗಾವಿಯ ನಗರದ ಕೇಂದ್ರ ಭಾಗದಲ್ಲಿ ಸ್ಥಾಪಿಸುವಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪಾತ್ರವನ್ನು ಸ್ಮರಿಸಿದರು,
ಕಿತ್ತೂರು ರಾಣಿ ಚೆನ್ನಮ್ಮ ನಾಡು ಕಂಡ ದಿಟ್ಟ ಧೀಮಂತ, ಶ್ರೇಷ್ಠ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರು. ಚನ್ನಮ್ಮ ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಕರ್ನಾಟಕದ ಹೆಮ್ಮೆಯ ಮಹಿಳೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ಬೆಳಗಾವಿಗೆ ಮಾತ್ರ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಅವರ ಜ್ಯೋತಿಯನ್ನು ಬೆಂಗಳೂರಿನವರೆಗೆ ಕೊಂಡೊಯ್ಯಲಾಗಿದೆ. ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನವರ ಕೊಡುಗೆಯನ್ನು ಸ್ಮರಿಸಿ , ಅವರ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಶಾಸಕ ರಾಜೂಗೌಡ ಮತ್ತು ಇತರರು ಉಪಸ್ಥಿತರಿದ್ದರು.