ಬೆಂಗಳೂರು : ನಗರದ ಮಹಾರಾಣಿ ಕಾಲೇಜಿನ ಸಮೀಪದ ಅಂಡರ್ ಪಾಸ್ ನಲ್ಲಿ ಬಸ್ ವೊಂದು ಸಿಲುಕಿದ್ದರಿಂದ ಬಸ್ ಅನ್ನು ಹೊರತೆಗೆಯಲು ಚಾಲಕ ಪರದಾಡಿದ ಘಟನೆ ನಡೆದಿದೆ.
ಅಂಡರ್ ಪಾಸ್ ಕೆಳಗೆ ಬಸ್ ಸಿಕ್ಕಾಕಿಕೊಂಡಿದ್ದರಿಂದ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸವಾರರರು ಪರದಾಡುವಂತಾಗಿತ್ತು. ಕಚೇರಿ ಮತ್ತು ಶಾಲಾ ಸಮಯವಾಗಿದ್ದರಿಂದ ಅನೇಕರು ಬಸ್ ಚಾಲಕನಿಗೆ ಹಿಡಿಶಾಪ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು.

ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗವನ್ನು ಕಲ್ಪಿಸಿ, ಟ್ರಾಫಿಕ್ ಜಾಮ್ ಅನ್ನು ನಿಯಂತ್ರಣಕ್ಕೆ ತಂದರು. ಖಾಸಗಿ ಬಸ್ ಮೇಲೆ ಓವರ್ ಲೋಡ್ ಲೆಗೇಜ್ ಹಾಕಿದ ಪರಿಣಾಮ ಬಸ್ ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡಿತ್ತು. ಚಾಲಕ ಎಷ್ಟೇ ಪ್ರಯತ್ನ ಪಟ್ಟರೂ ಸಿಲುಕಿರುವ ಬಸ್ ಅನ್ನು ಹೊರತೆಗೆಯಲು ಸಾಧ್ಯವಾಗಿಲ್ಲ.

ನಂತರ ಬಸ್ ಟೈರ್ ಗಾಳಿಯನ್ನು ಕಡಿಮೆ ಮಾಡಿ ಸಿಲುಕಿರುವ ಬಸ್ ಅನ್ನು ತೆಗೆಯಲಾಯಿತು. ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕಿಲೋ ಮೀಟರ್ ಗಟ್ಟಲೆ ಜಾಮ್ ಆಗಿದ್ದ ಟ್ರಾಫಿಕ್ ಕ್ರಮೇಣ ಸಹಜ ಸ್ಥಿತಿಗೆ ಬಂದಿತ್ತು.