ಬೆಂಗಳೂರು: ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹಾಗು ವಿದ್ಯುತ್ ಕಂಬಗಳ ಮೇಲೆ ಅಳವಡಿಸಿರುವ ಅನಧಿಕೃತ ಓಎಫ್ ಸಿ, ಇಂಟರ್ನೆಟ್ ಹಾಗು ಡಿಶ್ ಕೇಬಲ್ ಗಳನ್ನು ತೆರವುಗೊಳಿಸುವ ಕಾರ್ಯಚರಣೆಗೆ ಬೆಸ್ಕಾಂ ಚುರುಕು ಮುಟ್ಟಿಸಿದೆ.
ಬಿಬಿಎಂಪಿ ಆದೇಶ ಹಾಗು ಇತ್ತೀಚೆಗೆ ಸಂಜಯನಗರದ ಸಮೀಪ ಓಎಫ್ ಸಿ ಕೇಬಲ್ ತುಳಿದು ವಿದ್ಯುತ್ ಅಪಘಾತಕ್ಕೊಳಕ್ಕಾಗಿ ವ್ಯಕ್ತಿಯೊಬ್ಬರು ಮೃತ ಪಟ್ಟ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಮೇಲಿರುವ ಅನಧಿಕೃತ ಕೇಬಲ್ ಗಳನ್ನು ತೆರವುಗೊಳಿಸುವ ಕೆಲಸಕ್ಕೆ ಬೆಸ್ಕಾಂ ನಿಗಮ ಕಚೇರಿ ಇನ್ನಷ್ಟು ವೇಗ ನೀಡಿ, ಕೇಬಲ್ ಮತ್ತು ವೈರ್ ಗಳನ್ನು ತೆರವುಗೊಳಿಸಲು ಅಧೀನ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿತ್ತು.
ಇದುವರೆಗೆ ಬೆಂಗಳೂರು ನಗರ ಜಿಲ್ಲೆಯ ನಾಲ್ಕು ವೃತ್ತಗಳಲ್ಲಿ ಮೇ ತಿಂಗಳ ಅಂತ್ಯದ ವೇಳೆಗೆ ಸುಮಾರು 1,46,281 ಮೀಟರ್ ಉದ್ದದ ಓಎಫ್ ಸಿ ಕೇಬಲ್ , 87665 ಮೀಟರ್ ಉದ್ದದ ಡಿಶ್ ಕೇಬಲ್, 87,007 ಮೀಟರ್ ಉದ್ದದ ವಿವಿಧ ಖಾಸಗಿ ಕಂಪನಿಗಳ ಇಂಟರ್ನೆಟ್ ಡಾಟ ಕೇಬಲ್ ಹಾಗು ಸುಮಾರು 928 ಟಿಸಿಗಳ ಬಳಿ ಇರುವ ಅಪಾಯಕಾರಿ ಕೇಬಲ್ ಗಳನ್ನು ಈಗಾಗಲೇ ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಜತೆಗೆ ರಿಂಗ್ ಮೈನ್ ಯುನಿಟ್ (ಆರ್ ಎಂಯು) ಬಳಿ ಇರುವ 164 ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್ ), ಎಂ.ಎಲ್ ನಾಗರಾಜ್ ತಿಳಿಸಿದ್ದಾರೆ.
ಬೆಸ್ಕಾಂ ನಿಂದ ಅನುಮತಿ ಪಡೆಯದೆ ಮತ್ತು ಯಾವುದೇ ಸುರಕ್ಷಿತ ಕ್ರಮಗಳನ್ನು ಅಳವಡಿಸದೆ ವಿದ್ಯುತ್ ಕಂಬಗಳ ಮೇಲೆ ಜೋತು ಬಿಟ್ಟಿರುವ ಓಎಫ್ ಸಿ ಮತ್ತು ಇಂಟರ್ನೆಟ್ ಡಾಟ ಕೇಬಲ್ ಗಳನ್ನು ತೆರವುಗೊಳಿಲಾಗುತ್ತಿದೆ ಎಂದು ಅವರು ತಿಳಿಸಿದರು.

ಅನಧಿಕೃತ ಕೇಬಲ್ ಗಳ ತೆರವು ಕಾರ್ಯಚರಣೆ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚೆಗೆ ಸಂಜಯನಗರ ಮತ್ತು ಹೆಬ್ಬಾಳದಲ್ಲಿ ಸಂಭವಿಸಿದ ಪ್ರತ್ಯೇಕ ಇಲಾಖೇತರ ವಿದ್ಯುತ್ ಅಪಘಾತದಲ್ಲಿ ಇಬ್ಬರು ಮೃತ ಪಟ್ಟ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಮೇಲಿರುವ ಅನಧಿಕೃತ ಕೇಬಲ್ ಗಳ ತೆರವು ಕಾರ್ಯಚರಣೆಯನ್ನು ತೀವ್ರಗೊಳಿಸಲಾಗಿತ್ತು ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮತ್ತು ನಿರ್ದೇಶಕ (ತಾಂತ್ರಿಕ) ಡಿ. ನಾಗಾರ್ಜುನ ಅವರ ಸೂಚನೆ ಮೇರೆಗೆ ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್ ), ಎಲ್ಲ ವಲಯಗಳ ಮುಖ್ಯ ಇಂಜಿನಿಯರ್ ಗಳಿಗೆ ವಿದ್ಯುತ್ ವಿತರಣಾ ಕಂಬಗಳ ಮೇಲೆ ಅಳವಡಿಸಿರುವ ಅನಧಿಕೃತ ಕೇಬಲ್ ಗಳು ಮತ್ತು ವೈರ್ ಗಳನ್ನು ಜೂನ್ ತಿಂಗಳ ಒಳಗೆ ತೆರವುಗೊಳಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಅನಧಿಕೃತ ಕೇಬಲ್ ಗಳನ್ನು ಅಳವಡಿಸಿರುವ ಖಾಸಗಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.