ಬೆಂಗಳೂರು : ಕೇಂದ್ರ ಸರ್ಕಾರಕ್ಕೆ ಕಳೆದ 8 ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ 19 ಲಕ್ಷ ಕೋಟಿ, ಕಳೆದ ಒಂದೇ ವರ್ಷ 3 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 19 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ 1 ಲಕ್ಷದ 29 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ದೊಡ್ಡ ಸಾಧನೆಯಂತೆ ಪ್ರಚಾರ ಮಾಡಿದ್ರು. 42% ನಮ್ಮ ತೆರಿಗೆ ಪಾಲಿನ ಪ್ರಕಾರ ನಮಗೆ ಬಂದಿದ್ದರೆ ಕನಿಷ್ಟ 8 ಲಕ್ಷ ಕೋಟಿ ಬರಬೇಕಿತ್ತು. ಅಚ್ಚೇದಿನ್ ಹೆಸರಲ್ಲಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಗತ್ಯವಸ್ತುಗಳ ಬೆಲೆ ಎದ್ವಾತದ್ವಾ ಏರಿಕೆಯಾಗಿದೆ. ಉದಾಹರಣೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಡೀಸೆಲ್ ಬೆಲೆ 46 ರೂ. ಇತ್ತು, ಇಂದು ಅದು 95 ರೂ. ಆಗಿದೆ. ಅಂದರೆ ಎರಡು ಪಟ್ಟಾಗಿದೆ. ಪೆಟ್ರೋಲ್ 72 ರೂ. ಇತ್ತು, ಈಗ 102 ರೂ. ಆಗಿದೆ. ಗ್ಯಾಸ್ 414 ರೂ. ಇತ್ತು, ಈಗದು 1,050 ರೂ. ಆಗಿದೆ. ಗೊಬ್ಬರದ ಬೆಲೆ, ಕಬ್ಬಿಣ, ಸಿಮೆಂಟ್ ಬೆಲೆ ಎರಡು ಪಟ್ಟಾಗಿದೆ. ಅಚ್ಚೇದಿನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಹೇಗೆ ಜನರ ರಕ್ತವನ್ನು ತೆರಿಗೆ ರೂಪದಲ್ಲಿ ಕುಡಿದಿದ್ದಾರೆ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಾ.
ಈಗ ಜಿಎಸ್ಟಿ ಹೆಚ್ಚು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಈ ಜಿಎಸ್ಟಿ ಕೌನ್ಸಿಲ್ ನ ಒಬ್ಬ ಸದಸ್ಯರು. ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಮೇಲೆ ಜಿಎಸ್ಟಿ ತೆರಿಗೆ 0% ಇತ್ತು, ಅದನ್ನು 5% ಗೆ ಹೆಚ್ಚಿಸಿದ್ದಾರೆ. ಅಕ್ಕಿ, ಗೋದಿ, ಬಾರ್ಲಿ, ಓಟ್ಸ್ ಗೆ 0% ತೆರಿಗೆ ಇತ್ತು, ಅದೀಗ 5% ಗೆ ಹೆಚ್ಚಾಗಿದೆ. ಆಸ್ಪತ್ರೆ ಕೊಠಡಿಗಳ 5,000 ರೂ. ವರೆಗೆ 5% ಜಿಎಸ್ಟಿ ಹಾಕಿದ್ದಾರೆ, 1,000 ರೂಪಾಯಿಯ ಹೋಟೆಲ್ ಕೊಠಡಿಗಳಿಗೆ 12% ಜಿಎಸ್ಟಿ ಹಾಕಿದ್ದಾರೆ, ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇದ್ದದ್ದನ್ನು 12% ಮಾಡಿದ್ದಾರೆ. ಎಲ್.ಇ.ಡಿ ಬಲ್ಬ್ ಗಳಿಗೆ 12% ಇಂದ 18%, ಬ್ಯಾಂಕ್ ಚೆಕ್ ಪುಸ್ತಕಗಳಿಗೆ 0% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲೆ ತೆರಿಗೆ 5% ಇಂದ 18% ಮಾಡಿದ್ದಾರೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್ ಮೆರಿನ್ ಪಂಪ್ ಹಾಗೂ ಮೋಟಾರ್ ಗಳಿಗೆ 12% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಬರೆಯುವ ಹಾಗೂ ಮುದ್ರಿಸುವ ಇಂಕ್ ಗಳ ಮೇಲೆ 12% ಇಂದ 18% ತೆರಿಗೆ ಹೆಚ್ಚಳ ಮಾಡಿದ್ದಾರೆ. ಇಟ್ಟಿಗೆ ತಯಾರಿಸುವ ಜಾಗ್ ವರ್ಕ್ ಗಳ ಮೇಲಿನ ಜಿಎಸ್ಟಿ ಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಶೈಕ್ಷಣಿಕ ಬಳಕೆಯ ಭೂಪಟ, ಗ್ಲೋಬ್ ಗಳ ಮೇಲೆ 0% ಇಂದ 12% ಗೆ ತೆರಿಗೆ ಹಾಕಿದ್ದಾರೆ. ಇದು ಇಂದಿನಿಂದ ಜಾರಿಯಾಗುತ್ತಿದೆ. ನರೇಂದ್ರ ಮೋದಿ ಅವರ ಅಚ್ಚೇದಿನ್ ಭಾಗವೇ ಇದು? ಎಂದು ಕಿಡಿಕಾರಿದರು.
ಈ ಮೇಲಿನ ಎಲ್ಲಾ ಪದಾರ್ಥಗಳು ಬಡ ಮತ್ತು ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳಾಗಿವೆ. ಮೊದಲೇ ಬೆಲೆಯೇರಿಕೆ ಇದೆ, ಇಂಥಾ ಸಂದರ್ಭದಲ್ಲಿ ಜಿಎಸ್ಟಿ ಹೆಚ್ಚಳ ಮಾಡಿದರೆ ಜನರು ಪಾರಾಗೋದು ಹೇಗೆ? ಕಾರ್ಪೋರೇಟ್ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚು ಮಾಡಿದ್ದಾರೆ. ನಿರುದ್ಯೋಗಿಗಳಿಗೆ, ರೈತರಿಗೆ, ಕೂಲಿಕಾರರಿಗೆ, ಬೀದಿ ವ್ಯಾಪಾರಿಗಳಿಗೆ ಇಂದರಿಂದ ತೊಂದರೆಯಾಗುತ್ತದೆ. ಬಡವರ ರಕ್ತ ಹೀರುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ, ಇದಕ್ಕೆ ಎಲ್ಲಾ ರಾಜ್ಯ ಸರ್ಕಾರಗಳು ಸಾಥ್ ಕೊಡುತ್ತಿವೆ ಎಂಜು ಟಿಕೀಸಿದರು.
ಮೋದಿ ಅವರು 8 ವರ್ಷಗಳ ಹಾಗೂ ಬಸವರಾಜ ಬೊಮ್ಮಾಯಿ ಅವರು ತಮ್ಮ ಒಂದು ವರ್ಷದ ಸರ್ಕಾರದ ಸಾಧನೆಯನ್ನು ಆಚರಿಸುತ್ತಿದ್ದಾರೆ. ಆದರೆ ಜನರಿಗೆ ಬೆಲೆಯೇರಿಕೆ, ನಿರುದ್ಯೋಗ, ರೈತರಿಗೆ ಗೊಬ್ಬರ ಕೊರತೆ ಆಗಿರುವ ಬಗ್ಗೆ ಇವರು ಮಾತನಾಡುವುದಿಲ್ಲ. ನಾನು ಹೋದ ಕಡೆಯೆಲ್ಲಾ ರೈತರು ಬಂದು ಗೊಬ್ಬರಕ್ಕಾಗಿ ದೂರು ಕೊಡುತ್ತಿದ್ದಾರೆ. ಇವರ ಯೋಗ್ಯತೆಗೆ ರೈತರಿಗೆ ಗೊಬ್ಬರ ಕೊಡೋಕೆ ಆಗುತ್ತಿಲ್ಲ ಎಂದರು.
ಜಿಎಸ್ಟಿ ಹೆಚ್ಚಳದಿಂದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಉಳಿಯುತ್ತವಾ? ಇದರಿಂದ ಪಾರಾಗಲು ಅವು ಬೆಲೆ ಹೆಚ್ಚಳ ಮಾಡುತ್ತವೆ. ಇದರಿಂದ ಬಳಕೆದಾರರ ಮೇಲೆ ಹೆಚ್ಚು ಭಾರ ಬೀಳುತ್ತದೆ. ಬೆಲೆ ಹೆಚ್ಚಿದ ಕಾರಣಕ್ಕೆ ಖರೀದಿ ಕಡಿಮೆಯಾದರೆ ಈ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಿಹೋಗುತ್ತವೆ. ಜಿಎಸ್ಟಿ ಜಾರಿಯಾದ ಮೇಲೆ 60% ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಂದ್ ಆಗಿವೆ. ನೋಟು ರದ್ದತಿ, ಜಿಎಸ್ಟಿ ಜಾರಿಗೆ ಮೊದಲು ಈ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗ ಇದ್ದವು, ಈಗದು ಕೇವಲ ಎರಡೂವರೆ ಕೋಟಿಗೆ ಇಳಿದಿದೆ. ದೇಶದ ನಿರುದ್ಯೋಗ ಬೆಳವಣಿಗೆ ದರ 8% ಇದೆ. 2019 ರಲ್ಲಿ ರೈಲ್ವೇ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು, ಇದಕ್ಕೆ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್ಡಿ ಪದವೀಧರರು ಸೇರಿದಂತೆ ಒಟ್ಟು 1 ಕೋಟಿ 26 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. 1 ಹುದ್ದೆಗೆ ಸುಮಾರು 130 ಜನರಂತೆ ಅರ್ಜಿ ಹಾಕಿದ್ದರು. ಇದು ಇಂದಿನ ನಿರುದ್ಯೋಗ ಸಮಸ್ಯೆಯ ನೈಜ ಮುಖವನ್ನು ಅನಾವರಣಗೊಳಿಸಿದೆ.

ವಿರೋಧ ಪಕ್ಷವಾಗಿ ನಾವು ಯಾವಾಗೆಲ್ಲ ಸರ್ಕಾರದ ವಿರುದ್ಧ ಆರೋಪಗಳು ಬರುತ್ತದೆ, ಜನ ವಿರೋಧಿ ಕಾನೂನುಗಳು ಜಾರಿಯಾಗುತ್ತದೆ ಆಗ ಹೋರಾಟ ಮಾಡಿದ್ದೇವೆ. ಈಶ್ವರಪ್ಪ ಅವರು ಸುಮ್ಮನೆ ರಾಜೀನಾಮೆ ನೀಡಿದ್ರಾ? ನಮ್ಮ ಹೋರಾಟದ ಫಲದಿಂದ ಅವರು ರಾಜೀನಾಮೆ ನೀಡಿದ್ದು. ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇದ್ದೇವೆ.
ರಾಜ್ಯವನ್ನು ಹಾಳು ಮಾಡಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ
ಮಾರ್ಗರೇಟ್ ಆಳ್ವ ಅವರು ಒಬ್ಬ ಅನುಭವಿ ರಾಜಕಾರಣಿ. ರಾಜ್ಯಸಭೆ, ಲೋಕಸಭೆ ಸದಸ್ಯರಾಗಿದ್ದರು, ಕೇಂದ್ರದ ಮಂತ್ರಿ ಹಾಗೂ ಮೂರು- ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಶರದ್ ಪವಾರ್ ಅವರು ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಒಬ್ಬ ಮಹಿಳೆ, ಮುತ್ಸದ್ದಿ ರಾಜಕಾರಣಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕರ್ನಾಟಕದಲ್ಲಿ ಓದಿ ಲಾಯರ್ ಆಗಿ, ನಂತರ ಉನ್ನತ ಹುದ್ದೆಗೆ ಏರಿದವರನ್ನು ಅಭ್ಯರ್ಥಿ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ.
ಬಹಳ ವರ್ಷ ಬಿಜೆಪಿ ಅಭ್ಯರ್ಥಿಗಳು ಗೆದ್ದಿರಲಿಲ್ಲ, ಆಗ ಅವರನ್ನು ಹರಕೆ ಕುರಿ ಮಾಡಿದ್ದ? ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಿ ಮತ ಹಾಕಿದ್ರೆ 30% ಇರುವ ಬಿಜೆಪಿ ಶಾಸಕರಿಂದ ಗೆಲ್ಲೋಕೆ ಆಗುತ್ತಿತ್ತಾ? ಜಿಡಿಎಸ್, ನವೀನ್ ಪಟ್ನಾಯಕ್, ಎಐಡಿಎಂಕೆ, ಉದ್ಧವ್ ಠಾಕ್ರೆ ಎಲ್ಲಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ.
ಜೆಡಿಎಸ್ ಅನ್ನು ಜಾತ್ಯಾತೀತ ಪಕ್ಷ ಎನ್ನುತ್ತಾರೆ, ಆದ್ದರಿಂದ ನೀವು ದೇವೇಗೌಡರನ್ನೇ ಈ ಬಗ್ಗೆ ಕೇಳಬೇಕು. ದೇವೇಗೌಡರು ಮಮತಾ ಬ್ಯಾನರ್ಜಿ ಅವರು ಕರೆದಿದ್ದ ಸಭೆಗೂ ಹೋಗಿದ್ದರು, ಅಲ್ಲಿಂದ ಬಂದಮೇಲೆ ಬದಲಾವಣೆ ಮಾಡಿಕೊಂಡಿದ್ದಾರೆ.
ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲ್ಲ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನ ನನ್ನನ್ನು ಸೋಲಿಸಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದ ಸ್ಪರ್ಧೆ ಮಾಡಲ್ಲ ಎಂದರು.