ವಾಷಿಂಗ್ಟನ್ : ಎಫ್ ಬಿ ಐ ಏಜೆಂಟ್ಸ್ ಫ್ಲಾರಿಡಾದಲ್ಲಿರುವ ತಮ್ಮ ಮಾರ್ ಎ ಲಾಗೊ ನಿವಾಸದ ಮೇಲೆ ದಾಳಿ ಮಾಡಿ ಶೋಧ ನಡೆಸುತ್ತಿದ್ದಾರೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ತಮ್ಮ ಮನೆಯ ಸುರಕ್ಷಿತ ಬಾಗಿಲುಗಳನ್ನು ಒಡೆದು ಶೋಧ ಕಾರ್ಯ ನಡೆಸಲಾಗುತ್ತಿದೆ. ತಮ್ಮ ಮನೆಗೆ ಎಫ್ ಬಿ ಐ ಮುತ್ತಿಗೆ ಹಾಕಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಅಮೆರಿಕಾದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಆರೋಪಿಸಿರುವ ಟ್ರಂಪ್, ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕಾರ ನೀಡಿದ ಮೇಲೂ ತಮ್ಮ ಮನೆಯ ಮೇಲೆ ಅಘೋಷಿತ ದಾಳಿ ನಡೆದಿರುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

2020ರಲ್ಲಿ ಟ್ರಂಪ್ ಅವರು ಶ್ವೇತ ಭವನ ತೊರೆದ ಬಳಿಕ ತಮ್ಮ ನಿವಾಸಕ್ಕೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕಾ ನ್ಯಾಯಂಗ ಇಲಾಖೆ ತನಿಖೆ ನಡೆಸುತ್ತಿದೆ. ಈ ಆರೋಪದ ಹಿನ್ನೆಲೆಯಲ್ಲಿ ಟ್ರಂಪ್ ಅವರು ಈಗಾಗಲೇ ವಿಚಾರಣೆಗೂ ಒಳಪಟ್ಟಿದ್ದರು.
2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಅವರು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಈ ಎಫ್ ಬಿ ಐ ದಾಳಿ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಬಯಸದ ತೀವ್ರಗಾಮಿ ಎಡ ಡೆಮಾಕ್ರಾಟ್ ದಾಳಿಯಾಗಿದೆ. ಇದು ತೃತೀಯ ಜಗತ್ತಿನಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಟಿಕೀಸಿದ್ದಾರೆ.
#donald trump #america #fbi # enquiry #raid #florida house