ಬೆಂಗಳೂರು : ರಾಜ್ಯ ಗುತ್ತಿಗೆದಾರರ ಸಂಘ ನನ್ನ ಹೆಸರು ಉಲ್ಲೇಖಿಸಿ ಆರೋಪ ಮಾಡಿರುವ ಹಿನ್ನೆಲೆಯಲ್ಲಿ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೊಂದ ಮನಸ್ಸಿನಿಂದ ಈ ಮೊಕದ್ದಮೆ ಹಾಕುತ್ತಿದ್ದೇನೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಈ ಸಂಘದ ಎಲ್ಲರ ಮೇಲೂ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದೇನೆ ಎಂದು ತಿಳಿಸಿದರು.
ಮಾನನಷ್ಟ ಮೊಕದ್ದಮೆಗೆ ಇರುವ ಶಿಕ್ಷೆ ಇವರಿಗೆ ಆಗಲೇಬೇಕು ಎಂದು ಆಗ್ರಹಿಸಿದ ಸಚಿವ ಮುನಿರತ್ನ, ಕೆಂಪಣ್ಣ ಬೇರೆ ಯಾರು ಅಲ್ಲ… ಇವರು ನನಗೆ 20 ವರ್ಷಗಳಿಂದ ಪರಿಚಯ, ಆದರೆ, ಇತ್ತೀಚೆಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ವಿಪಕ್ಷಗಳ ಜೊತೆ ಕೈ ಜೋಡಿಸಿ, ಸರ್ಕಾರಕ್ಕೆ ಇಕ್ಕಟ್ಟು ಸೃಷ್ಟಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ 14 ತಿಂಗಳಿಂದ ಗುತ್ತಿಗೆದಾರರು ಮತ್ತು ಕೆಂಪಣ್ಣ 40% ಕಮಿಷನ್ ಆರೋಪ ಮಾಡುತ್ತಿದ್ದಾರೆ, 14 ತಿಂಗಳಿಂದ ಬರೀ ಅರೋಪ ಮಾಡುತ್ತಿದ್ದಾರೆ ವಿನಹ ಇದುವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ, ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಕೆಂಪಣ್ಣ ಭೇಟಿ ನೀಡಿದ್ದರು, ತದನಂತರ ಕೋಲಾರ ಉಸ್ತುವಾರಿ ಸಚಿವರು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.

ಕೆಂಪಣ್ಣ ಹೇಳಿಕೆ ಸತ್ಯಕ್ಕೆ ದೂರವಾದದ್ದು, ನಾನು ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ, ಕೋಲಾರದ ರಸ್ತೆ ಹದಗೆಟ್ಟಿವೆ, 21 & 22 ರಂದು ಎಲ್ಲಾ ರಸ್ತೆ ವೀಕ್ಷಣೆ ಮಾಡಿದ್ದೆ, ಎರಡು ದಿನಗಳಲ್ಲಿ ಎಲ್ಲಾ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಿದ್ದೆ, ಕಾಮಗಾರಿ ನಡೆದ ರಸ್ತೆಗಳು ಗುಂಡಿ ಬಿದ್ದಿವೆ, ರಸ್ತೆ ಗುಂಡಿ ರಿಪೇರಿ ಮಾಡಿ ಎಂದು ನಾನು ಹೇಳಿದ್ದೆ, ಆದ್ರೆ ಗುತ್ತಿಗೆದಾರರು ಮೊದಲು ಬಿಲ್ ಕ್ಲಿಯರ್ ಮಾಡಿ, ಆಮೇಲೆ ಕಾಮಗಾರಿ ವೀಕ್ಷಣೆ ಮಾಡಿ ಎಂದು ಹೇಳಿದ್ದರು ಎಂದು ಘಟನೆ ವಿವರಿಸಿದರು.