ESTABLISHMENT OF 8 NEW VV: ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು: 8 ನೂತನ ವಿವಿ ಗಳ ಸ್ಥಾಪನೆಗೆ ಹಾದಿ ಸುಗಮ: ಅಶ್ವತ್ಥನಾರಾಯಣ

ಬೆಂಗಳೂರು: ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಇದರಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ.ಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದಿದ್ದಾರೆ.
ಹೊಸ ವಿ.ವಿ.ಗಳ ಪೈಕಿ ಕ್ರಮವಾಗಿ ಚಾಮರಾಜನಗರ ವಿ.ವಿ.ಯಲ್ಲಿ 18, ಹಾಸನ ವಿ.ವಿ.ಯಲ್ಲಿ 36, ಹಾವೇರಿ 40, ಬೀದರ್ 140, ಕೊಡಗು 24, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ಇವುಗಳ ಜತೆಗೆ ಮಂಡ್ಯ ವಿ.ವಿ. ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ ಎಂದು ಅವರು ವಿವರಿಸಿದರು.
ಮಂಡ್ಯ ವಿವಿ ಒಂದನ್ನು ಹೊರತುಪಡಿಸಿ ಮಿಕ್ಕ 7 ವಿ.ವಿ.ಗಳ ಆರಂಭವನ್ನು ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂಪಾಯಿ ಒದಗಿಸಲಾಗಿದೆ. ಏಕೀಕೃತ ವಿವಿಯಾಗಿದ್ದ ಮಂಡ್ಯದ ಸರಕಾರಿ ಕಾಲೇಜನ್ನು ಪೂರ್ಣ ಪ್ರಮಾಣದ ವಿ.ವಿ.ಯಾಗಿ ಮಾಡುವ ತೀರ್ಮಾನವನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.
ಜಿಲ್ಲೆಗೊಂದು ವಿವಿ ಇರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ. ಈ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆ ಮಾಡಲಾಗುವುದು. ಜೊತೆಗೆ, ಯುವಜನರಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯ ಇದರ ಹಿಂದಿದೆ ಎಂದು ಸಚಿವರು ಹೇಳಿದರು.
ನೂತನ ವಿ.ವಿ.ಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ. ಇವು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಅವರು ಹೇಳಿದರು.

More News

You cannot copy content of this page