ತುಮಕೂರು : ಬಿಇಓ ಅಥವಾ ಡಿಡಿಪಿಐ ಯಾರೇ ಆಗಲಿ ಲಂಚ ಕೇಳುತ್ತಿದ್ದಾರೆ ಎಂಬುದನ್ನು ರುಪ್ಸಾ ಸಂಘಟನೆ ಇದುವರೆಗೂ ಯಾಕೆ ದೂರು ನೀಡಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರುಪ್ಸಾ ಸಂಘಟನೆಗೆ ಇದೀಗ ಹೊಟ್ಟೆನೋವು ಬಂದಿದೆ, ಅದಕ್ಕಾಗಿ ಅವರು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಂಘಟನೆ ವಿರುದ್ಧ ಹರಿಹಾಯ್ದರು.
ಶಿಕ್ಷಣ ಇಲಾಖೆಯಲ್ಲಿ ಕಮಿಷನ್ ಆರೋಪ ವಿಚಾರವನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ನಾನು ಹಲವಾರು ಬಾರಿ ಹೇಳಿದ್ದೀನಿ, ನಾನು ಮಂತ್ರಿಯಾದಾಗಿನಿಂದ ಯಾವುದೇ ಆರೋಪ ಬಂದರೂ, ತಕ್ಷಣ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅನೇಕ ಸುಧಾರಣೆಗಳನ್ನ ತಂದಂತಹ ಡಿಪಾರ್ಟ್ ಮೆಂಟ್ ಇದೆ ಅಂದ್ರೆ ಅದು ಎಜುಕೇಶನ್ ಡಿಪಾರ್ಟ್ ಮೆಂಟ್, ನಮ್ಮ ಸುಧಾರಣೆಗಿಳಿಂದ ಕೆಲವರಿಗೆ ಹೊಟ್ಟೆ ನೋವು ಬರಬಹುದು, ಅವರೆಲ್ಲ ಆಧಾರ ರಹಿತ ಆರೋಪ ಮಾಡಿ ಮಾತನಾಡುವಂತಹದ್ದು ಈಗಾಗಲೇ ಶುರು ಮಾಡಿದ್ದಾರೆ ಎಂದರು.

ನಾಳೆ ಅಥವಾ ನಾಳಿದ್ದು ನಮ್ಮ ಅಧಿಕಾರಿಗಳು ಆಧಾರ ಸಮೇತ ಪೂರ್ಣ ವಿವರಗಳನ್ನ ನೀಡುತ್ತಾರೆ ಎಂದು ಹೇಳಿದ ಸಚಿವರು, ಇದುವರೆಗೂ ಎಲ್ಲಾದ್ರೂ ಕಂಪ್ಲೇಂಟ್ ಮಾಡಿರೋದನ್ನ ನನ್ನ ಕೈಯಲ್ಲಿ ಕೊಡಿ ಅಥವಾ ಬಿಇಓ ಕಮಿಷನ್ ಕೇಳಿದ್ರೆ ಡಿಡಿಪಿಐ ಕೈಯಲ್ಲಿ ಕಂಪ್ಲೇಟ್ ಕೊಡಿ, ಡಿಡಿಪಿಐ ಮಾಡಿದ್ರೆ ಕಮಿಷನರ್ ಕೈಯಲ್ಲಿ ಕೊಡಿ ಎಂದು ಆಗ್ರಹಿಸಿದರು.