ಮಂಗಳೂರು : ಕರ್ನಾಟಕದ ಸಿಆರ್ ಝೆಡ್ ಮಾಸ್ಟರ್ ಪ್ಲಾನ್ ಅನ್ನು ಕೇಂದ್ರ ಸರ್ಕಾರ ಅನುಮೋದನೆ ನೀಡಿ ಆದೇಶ ಮಾಡಿದೆ. ಕರ್ನಾಟಕದ 30 ವರ್ಷದ ಹೋರಾಟಕ್ಕೆ ಜಯ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಂಗಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ರೂ. 3,800 ಕೋಟಿ ಮೊತ್ತದ ವಿವಿಧ ಯೋಜನೆಗಳ ಶಿಲಾನ್ಯಾಸ , ಭೂಮಿ ಪೂಜೆ ಕಾರ್ಯಕ್ರಮ ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಕರಾವಳಿ ಭಾಗದ ಆರ್ಥಿಕತೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಿದೆ. ಇಂದು ಸಾಗರ್ ಮಾಲಾ ಯೋಜನೆಯಲ್ಲಿ 18 ಯೋಜನೆಗಳನ್ನು ಪೂರ್ಣಗೊಳಿಸಿ, 14 ಯೋಜನೆಗಳನ್ನು ಇದೇ ವರ್ಷ 950 ಕೋಟಿ ರೂ.ಗಳ ಯೋಜನೆಗೆ ಜಲಸಾರಿಗೆ ಮತ್ತು ಬಂದರು ಇಲಾಖೆ ಅನುಮೋದನೆ ನೀಡಲಾಗಿದೆ.

ಕಾರವಾರದ ಮಾಜಾಳಿ ಬಂದರು ಅಭಿವೃದ್ಧಿಯ 350 ಕೋಟಿ ರೂ. ಗಳ ಯೋಜನೆಗೆ ಅನುಮೋದನೆ ದೊರೆತಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರರಿಗೆ ಅನುಕೂಲವಾಗಲು ಆಳಸಮುದ್ರ ಮೀನುಗಾರಿಕೆಗಾಗಿ 100 ಹೈಸ್ಪೀಡ್ ದೋಣಿಗಳನ್ನು ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಎಲ್ಲ ಯೋಜನೆಗಳಿಂದ ಕರಾವಳಿ ಭಾಗದ ಸಮಗ್ರ ಅಭಿವೃಧ್ಧಿ ಆಗುತ್ತದೆ ಎಂದರು.
ನವಕರ್ನಾಟಕದಿಂದ ನವಭಾರತದ ಅಭಿವೃದ್ಧಿ ಸಾಧ್ಯವಾಗಲಿದೆ
ಸರ್ಕಾರದಿಂದ 2 ಬಂದರುಗಳ ಅಭಿವೃದ್ಧಿ ಜೊತೆಗೆ ನವ ಮಂಗಳೂರು ಬಂದರು, ಕಾರವಾರ ಬಂದರುಗಳ ವಿಸ್ತರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಿಯವರ ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬಲು ಈ ಬಂದರುಗಳು ಸಹಕರಿಸಲಿದೆ ಎಂದು ನುಡಿದರು.

ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. 2 ಲಕ್ಷ ಮೀನುಗಾರರ ಮಕ್ಕಳಿಗೆ ಅನುಕೂಲವಾಗಲಿದೆ. 5 ಸಾವಿರ ಮನೆಗಳನ್ನು 64 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ. ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕಾ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ.
ಕರಾವಳಿ ಅಭಿವೃದ್ಧಿಯ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ದಿ
ವಿದೇಶ ವಿನಿಮಯ ಹೆಚ್ಚಾಗಬೇಕಾದರೆ ಆಮದು, ರಫ್ತು ಹೆಚ್ಚಾಗಲು ನಮ್ಮ ಬಂದರುಗಳ ನಿರ್ವಹಣಾ ಸಾಮಥ್ರ್ಯ ಹೆಚ್ಚಾಗಬೇಕು. ಇಷ್ಟು ವರ್ಷದ ಯೋಜನೆ ಇಂದು ಪ್ರತಿಫಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 3800 ಕೋಟಿ ರೂ.ಗಳ ವೆಚ್ಚದಲ್ಲಿ ನವ ಮಂಗಳೂರು ಬಂದರಿನ ದೊಡ್ಡ ಅನುಕೂಲ ಕಲ್ಪಿಸಲಿದ್ದು, 8 ವರ್ಷದ ಯೋಜನೆ ಇಂದು ಫಲಪ್ರದವಾಗಿದೆ.

ನವ ಮಂಗಳೂರು ಬಂದರು ಅಭಿವೃದ್ಧಿ ಆಗುತ್ತಿದೆ. ಇದರ ಸರಕು ನಿರ್ವಹಣೆ 4 ಪಟ್ಟು ಹೆಚ್ಚಾಗಿದೆ. ಎಲ್.ಪಿ.ಜಿ ಟರ್ಮಿನಲ್ ಸ್ಥಾಪನೆಯಾಗುತ್ತಿದೆ. ತೈಲ ಸಂಸ್ಕರಣಾಗಾರವೂ ನಿರ್ಮಾಣವಾಗುತ್ತಿದ್ದು, ಬರುವ ದಿನಗಳಲ್ಲಿ ಈ ಕರಾವಳಿ ಪ್ರದೇಶದ ಅಭಿವೃದ್ಧಿಯ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ ಎಂದರು.
