CET RANKING CONFUSION: ಸಿಇಟಿ ರಾಂಕಿಂಗ್ ಗೊಂದಲ: ಹೈಕೋರ್ಟ್ ತೀರ್ಪು ಪ್ರಶ್ನಿಸಲು ತೀರ್ಮಾನ

ಬೆಂಗಳೂರು: 2020-21ರಲ್ಲಿ ಪಿಯುಸಿ ತೇರ್ಗಡೆಯಾಗಿ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂಬ ಹೈಕೋರ್ಟ್ ತೀರ್ಪಿನಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಹೀಗಾಗಿ ಅದನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಸಂಬಂಧ ತಮ್ಮ ನಿವಾಸದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಸೋಮವಾರ ಬೆಳಿಗ್ಗೆ ಅವರು ದೀರ್ಘ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ಅವರು, ತೀರ್ಪಿತ್ತಿರುವ ಏಕ ಸದಸ್ಯ ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಅಥವಾ ಮೇಲ್ಮನವಿ ಸಲ್ಲಿಸಬೇಕೋ ಎನ್ನುವುದನ್ನು ವಕೀಲರ‌ ತೀರ್ಮಾನಿಸುತ್ತಾರೆ. ತ್ವರಿತವಾಗಿ ಯಾವುದು ಆಗುತ್ತದೊ ಅದನ್ನು ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕೋರ್ಟ್ ತೀರ್ಪನ್ನು ಪಾಲಿಸಲು ಹೋದರೆ ಈ ವರ್ಷ ಸಿಇಟಿ ಬರೆದಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅವರ ರಾಂಕ್ ಪಟ್ಟಿ ದೊಡ್ಡ ಪ್ರಮಾಣದಲ್ಲಿ ಏರುಪೇರಾಗುತ್ತದೆ ಎಂದು ಅವರು ತಿಳಿಸಿದರು.

ಕೋರ್ಟ್ ಮೆಟ್ಟಿಲೇರಿದ್ದವರು ಯಾವುದೋ ಒಂದು ತಾಂತ್ರಿಕ ಅಂಶಕ್ಕೆ ಅಂಟಿಕೊಂಡಿದ್ದಾರೆ. ಹೋದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕೈಗೊಂಡ ತೀರ್ಮಾನವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ನುಡಿದರು.
ಹೋದ ವರ್ಷದ ವಿದ್ಯಾರ್ಥಿಗಳ ಬಗ್ಗೆ ನಮಗೆ ಅಸಮಾಧಾನವೇನಿಲ್ಲ. ನಾವು ಯಾರಿಗೂ ಅನ್ಯಾಯ ಆಗದಂತೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಎಲ್ಲವೂ ನಿಗದಿತ ಕಾಲಮಿತಿಯಲ್ಲೇ ನಡೆಯಲಿದೆ ಎಂದು ಅವರು ಭರವಸೆ ನೀಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಮತ್ತು ಕಾನೂನು ತಜ್ಞರ ಭಾಗವಹಿಸಿದ್ದರು.

#cet ranking #highcourt #cn ashwathnarayan #education department #students

More News

You cannot copy content of this page