ಬೆಳಗಾವಿ: ಸಚಿವ ಉಮೇಶ್ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಅತ್ಯಂತ ಭಾರವಾದ ಹೃದಯದಿಂದ ನಾನು ಬೆಳಗಾವಿಗೆ ಬಂದಿದ್ದೇನೆ, ಉಮೇಶ ಕತ್ತಿ ಅವರ ಅಂತ್ಯಕ್ರಿಯೆಗೆ ಬಂದಿದ್ದೇನೆ, ಅಂತ್ಯಕ್ರಿಯೆ ಎಲ್ಲ ವ್ಯವಸ್ಥೆ ಮಾಡಲಾಗಿದೆ, ಅವರ ಮನೆಗೆ ಪೂಜೆ, ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜನರು ದೊಡ್ಡ ಪ್ರಮಾಣದಲ್ಲಿ ಅಂತಿಮ ದರ್ಶನಕ್ಕೆ ಬರೋದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಜನೋತ್ಸವ ಮುಂದೂಡಿಕೆ
ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮವನ್ನು ಇದೇ ತಿಂಗಳ 11ಕ್ಕೆ ಮುಂದೂಡಾಗಿದೆ. ರಾಜ್ಯದಲ್ಲಿ ಮೂರು ದಿನಗಳ ಕಾಲಸರ್ಕಾರದಿಂದ ಶೋಕಾಚರಣೆ ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನಾ ಸಚಿವ ಕೆ ಸುಧಾಕರ್ ಅವರು ನಾಳೆ ಎಂದಿನಂತೆ ಕಾರ್ಯಕ್ರಮ ನಡೆಸಲಾಗುವುದು ಎಂದು ಧ್ವನಿ ಮೂಲಕ ಸ ದೇಶ ರವಾನೆ ಮಾಡಿದ್ದರು. ಇದಕ್ಕೆ ವ್ಯಾಪಕ ಪ್ರತಿರೋಧ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮವನ್ನು ಮುಂದೂಡಿದೆ.
ಇದು ಎರಡನೇ ಬಾರಿ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದ್ದು, ಈ ಹಿಂದೆ ಸುಳ್ಯಾದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರು ಕೊಲೆ ನಡೆದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.