MINISTER UMESH KATHI NO MORE: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ, ಸಚಿವ ಉಮೇಶ್ ಕತ್ತಿ ಇನ್ನಿಲ್ಲ

ಬೆಂಗಳೂರು : ಬೆಳಗಾವಿ ಜಿಲ್ಲೆಯ ಹಿರಿಯ ಶಾಸಕ ಜನತಾ ಪರಿವಾರದ ಹಿರಿಯ ಮುತ್ಸದ್ಧಿ, ನೇರ ನುಡಿಯ ಸಚಿವ ಉಮೇಶ್ ಕತ್ತಿ ರಾತ್ರಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಮನೆಯಲ್ಲಿಯೇ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದ ಅವರನ್ನು ಕುಟುಂಬದವರು ತಕ್ಷಣವೇ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಮ್ಮನ್ನು ಅಗಲಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಅರಣ್ಯ ಸಚಿವರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಮತ್ತು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಾರೆ.
9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ ನಾಲ್ಕನೇ ಬಾರಿಗೆ ಸಚಿವರಾಗಿದ್ದಾರೆ. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಿಸಿದ್ದಾರೆ.
ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗೆಲುವು ಕಂಡರು.
1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆದ್ದರು.
2004ರಲ್ಲಿ ಕಾಂಗ್ರೆಸ್‌ಗೆ ಬಂದ ಉಮೇಶ್ ಕತ್ತಿ ಚುನಾವಣೆಯಲ್ಲಿ ಸೋಲು ಕಂಡರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಸೋಲು ಕಂಡಿರುವುದು. 2008ರಲ್ಲಿ ಜೆಡಿಎಸ್ ಸೇರಿದರು, ಗೆಲುವು ಕಂಡರು.

ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು. 2013, 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.
ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನದಿಂದಾಗಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು.
2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಿಕ್ಕಿತು.
2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದಾರೆ. ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರಾಗಿದ್ದಾರೆ.

#umesh kathi #forest minister #food minister #no more #expired #ms ramaiah hospital

More News

You cannot copy content of this page