ಬೆಂಗಳೂರು : ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆದಿತ್ತು ಎಂಬ ಸಚಿವ ಸುನೀಲ್ ಕುಮಾರ್ ಹೇಳಿಕೆಯನ್ನು ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಪದ ಮಾಡಿದ ಮೇಲೆ ಅವರು ಶ್ವೇತಪತ್ರದ ಮೂಲಕ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸುಧೀರ್ಘವಾದ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರ ಮತ್ತು ಇಂಧನ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೈತರ ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಮಾಡಿದ್ದರು ಅಂದರೆ ಏನು ಅರ್ಥ? ಅಳವಡಿಸಿದ್ದೆವು ಎಂದೆ? ಎಲ್ಲಿ ಅಳವಡಿಸಿದ್ದೇವೆ? ಮಿಟರ್ ಅಳವಡಿಸಲು ಟೆಂಡರ್ ಕರೆದಿದ್ದೇವೆವೆ? ಯಾವ ಕಂಪೆನಿಗೆ ಆದೇಶ ಕೊಟ್ಟಿದ್ದೆವು? ನಮ್ಮ ಸರ್ಕಾರ ಮೀಟರ್ ಅಳವಡಿಸಲು ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಿದ್ದರೆ ಅದರ ಪ್ರತಿಗಳೆಲ್ಲಿವೆ? ಯಾವ ರೈತರಿಗೆ ತೊಂದರೆ ಕೊಟ್ಟಿದ್ದೇವೆ? ದಾಖಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮೋದಿ ಸರ್ಕಾರ ಹೊಸ ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸಲು, ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸುತ್ತಿದೆ. ಹೊಸ ವಿದ್ಯುತ್ ಬಿಲ್ಲನ್ನು ಈಗಾಗಲೆ ಪಾರ್ಲಿಮೆಂಟಿನಲ್ಲಿ ಮಂಡಿಸಿದೆ. ಕರಾಳ ಕೊರೋನದ ಕರ್ಫ್ಯೂ ಇದ್ದಾಗಲೆ ಕರಡನ್ನು ಸಿದ್ಧಪಡಿಸಿ ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಂತೆ ಮಾಡಿದ್ದರು. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ರೈತ ದ್ರೋಹದ ಕಾನೂನನ್ನು ಜಾರಿಗೆ ತಂದಿದ್ದರೆ ಅದರ ದಾಖಲೆ ಬಿಡುಗಡೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ತರಲು ಹೊರಟಿರುವ ವಿದ್ಯುತ್ ಬಿಲ್ನ ವಿರುದ್ಧ ಮುಂದಿನ ಅಧಿವೇಶನದಲ್ಲಿ ನೀವೇ ನಿರ್ಣಯವನ್ನು ಮಂಡಿಸಿ, ನೀವು ತರುವ ನಿರ್ಣಯದ ಪರವಾಗಿ ನಾವೆಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸುತ್ತೇವೆ ಎಂದು ಹೇಳಿದ ಅವರು, ಯಾವ ಕಾರಣಕ್ಕೂ ಕರ್ನಾಟಕದ ರೈತರ ಮೇಲೆ ಹಾಗೂ ಉಳಿದೆಲ್ಲ ಜನ ವರ್ಗಗಳ ಮೇಲೆ ಈ ಕರಾಳ ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಒಮ್ಮತದ ನಿರ್ಣಯವನ್ನು ಅಂಗೀಕರಿಸಿ ಕಳಿಸೋಣ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲ ಇತ್ತು. ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಹಣಕಾಸಿನ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ನಾನು ಈ ಸಾಲವನ್ನು ಹೀಗೇ ಬಿಟ್ಟರೆ, ವಿದ್ಯುತ್ ಇಲಾಖೆಯು ಮುಳುಗಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಎಸ್ಕಾಂಗಳ ಬಾಕಿಗಳನ್ನು ತೀರಿಸಲು ಸಾಲ ಮಾಡಿದ್ದೆವು. ಅಗತ್ಯ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ನಷ್ಟ ಎನ್ನುವುದಿಲ್ಲ. ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ತತ್ವಗಳನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿದ್ಯುತ್ ಇಲಾಖೆಯ ಕುರಿತು ತನಿಖೆ ಮಾಡುವ ಉದ್ದೇಶವಿದ್ದರೆ 2008 ರಿಂದ ನಡೆದ ಎಲ್ಲ ಖರೀದಿ ಒಪ್ಪಂದಗಳಿಂದ ಹಿಡಿದು ಈವರೆಗಿನ ಪ್ರತಿಯೊಂದು ವಹಿವಾಟುಗಳನ್ನೂ ಸೇರಿಸಿ, ತನಿಖೆ ಮಾಡಬೇಕು. ಈ ತನಿಖೆಯ ನೇತೃತ್ವವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೆ ನಡೆಸಬೇಕೆಂದು ಆಗ್ರಹಿಸುತ್ತೇನೆ. ಮತ್ತು ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಕಳೆದ 15 ವರ್ಷಗಳಿಂದ ಏನೇನಾಗಿದೆ ಎಂಬುದರ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು.
#SIDDARAMAIAH #FORMER CM #MINISTER SUIL KUMAR #ENERGY MINISTER #FARMER’S PUMP SET #METER TO PUMP SET