ಧೈರ್ಯಶಾಲಿ, ಸಾಹಸಿಯಾದವನಿಗೆ ಪ್ರರಿಶ್ರಮವೇ ಜೀವಾಳವಾಗಿರುತ್ತದೆ. ಯಾವುದೇ ಕ್ಷೇತ್ರವಿರಲಿ, ಯಶಸ್ಸು ಸುಮ್ಮನೆ ಬರುವುದಿಲ್ಲ. ಸಾಧನೆಗಾಗಿ ತುಂಬಾ ಶ್ರಮಿಸಬೇಕಾಗುತ್ತದೆ. ಕಾರಣ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ನಿರಂತರ ದುಡಿಮೆ ಮಾಡುವವರೇ ಈ ಜಗತ್ತಿನಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ.
ಇಂಥಹ ಸ್ವಸಾಮರ್ಥ್ಯದ ನೆಲೆಯಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ನಮ್ಮೆಲ್ಲರ ಮಧ್ಯೆ ಬೆಳೆದಿರುವ ಉಮೇಶ ವಿಶ್ವನಾಥ ಕತ್ತಿ. ಓರ್ವ ಉತ್ತರ ಕರ್ನಾಟಕದ ಕನಸುಗಾರ, ಹೋರಾಟಗಾರ, ಛಲಗಾರರು. ಇವೆಲ್ಲವುಗಳ ಜೊತೆ ಪ್ರೀತಿ, ವಿಶ್ವಾಸ, ಅಂತ:ಕರುಣೆ, ಅನುಕಂಪ ಗುಣಗಳಿಂದ ಜನಪ್ರಿಯ ನಾಯಕರು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದ್ದಾರೆ.
ಉಮೇಶ ಕತ್ತಿ ಅವರೆಂದರೆ ಸಾಕು ಎಲ್ಲರ ಬಾಯಿಯಲ್ಲೂ ಅವರ ಹೆಸರೇ ತುಂಬಿ ತುಳುಕುತ್ತದೆ. ಉತ್ತರ ಕರ್ನಾಟಕದ ಓರ್ವ ಧೀಮಂತ ಶಾಸಕರಾಗಿ, ಅವರಲ್ಲಿರುವ ಜನಪ್ರಿಯತೆ ಹಲವು ಅವಧಿಯವರೆಗೆ ಸಚಿವರನ್ನಾಗಿಸಿತಲ್ಲದೇ ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಮಹತ್ವದ ಜನಪರ ಕಾರ್ಯಗಳಿಂದ ಕರ್ನಾಟಕದ ಮನೆಮಾತಾಗಿದ್ದಾರೆ ಅತಿಶಯೋಕ್ತಿಯಾಗದು.
1985 ರಿಂದ 2004 ಹಾಗೂ 2008 ರಿಂದ 2013 ಹೀಗೆ ಜನತಾದಳ, ಜೆ.ಡಿ.ಎಸ್. ಹಾಗೂ ಭಾರತೀಯ ಜನತಾ ಪಕ್ಷದ ಹುರಿಯಾಳಾಗಿ ವಿಜಯಶಾಲಿಯಾಗಿ, ವಿಧಾನಸಭೆಯ ಎರಡನೆಯ ಹಿರಿಯ ಸದಸ್ಯರಾಗಿ ಗಮನ ಸೆಳೆದಿದ್ದಾರೆ.
ಇದ್ದಂತೆ ನೇರ ಹೇಳಬಲ್ಲ ಎದೆಗಾರಿಕೆ, ಮಹತ್ವಾಂಕಾಂಕ್ಷೆ ಗುಣ ಹೊಂದಿರುವ ಅವರು ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಮಂತ್ರಿಮಂಡಲದಲ್ಲಿ ಸಕ್ಕರೆ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ ಲೋಕೋಪಯೋಗಿ ಸಚಿವರ ಕಾಲಾವಧಿಯಲ್ಲಿ ಹಳ್ಳಿಯಿಂದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ದುರ್ಗಮ ದಾರಿಯನ್ನೂ ಸುಗಮಗೊಳಿಸುವ ಮೂಲಕ ಜನಪರ ಕೆಲಸಗಳನ್ನು ಮಾಡಿ ತೋರಿಸಿದ್ದ ಖ್ಯಾತಿ ಇವರದ್ದಾಗಿದೆ.
ಮೇ-2008 ರಲ್ಲಿ ಶಾಸಕರಾಗಿ ಆಯ್ಕೆಯಾದರೂ ಸಹ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು. ಬಯಸದೇ ಬಂದ ಭಾಗ್ಯವೆಂಬಂತೆ ತೋಟಗಾರಿಕೆ ಮತ್ತು ಬಂದೀಖಾನೆ ಸಚಿವರಾಗಿ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಕೊಂಡರು. ಕೆಲವು ತಿಂಗಳು ರಾಮನಗರ ಜಿಲ್ಲೆಯ ಉಸ್ತುವಾರಿ ಕಾರ್ಯ ವಹಿಸಿಕೊಂಡು ಆ ಜಿಲ್ಲೆಯಲ್ಲೇ ರಾಜೀವ ಗಾಂಧಿ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದುಂಟು. ಬಂದೀಖಾನೆಯಲ್ಲಿರುವ ಸನ್ನಡತೆಯ ಕೈದಿಗಳ ಬಿಡುಗಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.
ಕೃಷಿ ಇಲಾಖೆಯಿಂದ ಬೇರ್ಪಡಿಸಿ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಸ್ಥಾಪನೆ ಅನುಮತಿ ನೀಡಿ ಆ ವಲಯಕ್ಕೂ ವಿಶೇಷ ಪ್ರಾಶಸ್ತ್ಯ ಕೊಡುವುದರ ಜೊತೆಗೆ ನಂತರ 22-9-2010 ರಂದು ಕೃಷಿ ಸಚಿವರಾಗಿ ರೈತ ವರ್ಗಕ್ಕೆ ಪ್ರಯೋಜಕಾರಿ ಕೃಷಿ ಬಜೆಟ್ ನೀಡಿದ ಪ್ರಪ್ರಥಮ ಕೃಷಿ ಸಚಿವರೆನ್ನಬಹುದಾಗಿದೆ.

ಅಂದು ಭೂ ಚೇತನ, ಸಾವಯವ ಕೃಷಿ ಮಿಷನ್, ರೈತ ಸಂಪರ್ಕ ಕೇಂದ್ರದ ಕಂಪ್ಯೂಟಿಕರಣ, ಮೈಕ್ರೋ ಇರಿಗೇಶನ್, ಹಸಿರು ಕ್ರಾಂತಿ, ಜಾಗತಿಕ ಕೃಷಿ ಬಂಡವಾಳ ಸಮಾವೇಶ, ಭಾರತ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾಗತಿಕ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ಸಂಘಟಿಸಿ ಬಂಡವಾಳ ಹೂಡಿಕೆಗೆ ಒಪ್ಪಂದ ಕೈಕೊಂಡರು.
ಒಂದೊಮ್ಮೆ ಬೆಳಗಾವಿ ಜಿ.ಪಂ.೮೬ ಸ್ಥಾನಗಳ ಪೈಕಿ ೬೪ ರಲ್ಲಿ ಸ್ಥಾನಗಳನ್ನು ಗೆಲ್ಲಿಸಿ ಪ್ರಪ್ರಥಮ ಬಾರಿಗೆ ಜಿ.ಪಂ. ದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು.
೧೯೮೫ ರಲ್ಲಿ ತಂದೆ ವಿಶ್ವನಾಥ ಕತ್ತಿ ಅವರಿಂದ ಅಕಾಲಿಕ ತೆರವಾದ ಹುಕ್ಕೇರಿ ವಿಧಾನಸಭೆ ಜನತಾಪಕ್ಷದಿಂದ ಪ್ರವೇಶಿಸಿದರು. ಆಗ 25 ರ ಹರೆಯ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡರು. ಮತ್ತೆ 1989, 1994, 1999, (2004 ರಲ್ಲಿ ಹಿನ್ನಡೆ) ಮೇ-2008, ಉಪಚುನಾವಣೆ ಡಿಸೆಂಬರ-2008, 2013 ರಲ್ಲಿ ಶಾಸಕರಾಗಿ ಪುನರಾಯ್ಕೆಯಾದ ನಂತರ ಅವರ ರಾಜಕೀಯ ಜೀವನದಲ್ಲಿ ಅನೇಕ ಮಹತ್ವದ ಬದಲಾವಣೆಗಳಾದವು.
ಇದೇ ಸಮಯಲ್ಲಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಯೆಂದು ಹೆಗ್ಗಳಿಕೆಗೆ ಪಾತ್ರವಾದ ಸಂಕೇಶ್ವದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಜರುಗಿದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದಿನ ಆಡಳಿತ ಮಂಡಳಿಯೊಂದಿಗೆ ಸೆಣಸಾಡಿ ಉಮೇಶ ಕತ್ತಿ ಅವರ ಗುಂಪು ಪ್ರಚಂಡ ಜಯ ಸಾಧಿಸಿತು. ಐತಿಹಾಸಿಕ ದಾಖಲೆಯೊಂದಿಗೆ ಸಹೋದರ ರಮೇಶ ಕತ್ತಿ ಕಾರ್ಖಾನೆಯ ಅಧ್ಯಕ್ಷರಾಗಿ ಸದಸ್ಯರ ಹಿತ ಕಾಪಾಡಿದರು. ಇಂದಿಗೂ ಸಹ ಕಾರ್ಖಾನೆಯು ಅವರ ಮಾರ್ಗದರ್ಶನದಲ್ಲಿ ಪ್ರಗತಿಪಥದತ್ತ ಮುನ್ನಡೆದಿದೆ. ಇದು ಉಮೇಶ ಕತ್ತಿ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು.
1996 ರಲ್ಲಿ ಅವರ ಜಗಜ್ಜಾಹೀರಾದ ಜನಪ್ರಿಯತೆ ಮೆಚ್ಚಿ ಪಕ್ಷದ ವರಿಷ್ಠರು ಅಂದಿನ ಮಾನ್ಯಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ತಮ್ಮ ಸಂಪುಟದಲ್ಲಿ ಸಕ್ಕರೆ ಸಚಿವ ಕಲ್ಪಿಸಿಕೊಟ್ಟರು.
ನಂತರ ಕಾರ್ಯದಕ್ಷತೆಯಿಂದ 1998 ರಲ್ಲಿ ಲೋಕೋಪಯೋಗಿ ಸಚಿವರಾಗಿ ಹಿರಣ್ಯಕೇಶಿ ನದಿಗೆ ತೂಗುಸೇತುವೆ, ಕೊಟಬಾಗಿ ಯಾತ ನೀರಾವರಿ ಯೋಜನೆ, ಬಡಕುಂದ್ರಿ ನದಿಗೆ ಸರ್ವಋತು ಸೇತುವೆ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಸಮುದಾಯ ಭವನ ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಂತಿವೆ.
1999 ರಲ್ಲಿ 4 ನೇ ಬಾರಿಗೆ ಶಾಸಕರಾಗಿ ಸಾರ್ವಜನಿಕ ಸೇವೆಯಲ್ಲಿ ನೇರ ನುಡಿಗೆ ಹೆಸರಾದರು. ಸುಳ್ಳು ಆಶ್ವಾಸನೆ ನೀಡುವ ಜಾಯಮಾನದವರಲ್ಲ. ತಮ್ಮ ತಂದೆಯವರ ಹೆಸರಿನಲ್ಲಿ ವಿಶ್ವನಾಥ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಆ ಭಾಗದ ಸಾವಿರಾರು ರೈತ ಬಾಂಧವರ ಹಾಗೂ ಸಾವಿರಾರು ಕಾರ್ಮಿಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಆರ್ಥಿಕ ಎಳ್ಗೆಗೆ ಇಂದಿಗೂ ಸಹ ಶ್ರಮಿಸುತ್ತಿದ್ದಾರೆ. ತಮ್ಮ ಕಾರ್ಖಾನೆಯ ಉಸ್ತುವಾರಿಯನ್ನು ಸುಪುತ್ರ ನಿಖಿಲ್ ಕತ್ತಿಗೆ ವಹಿಸಿಕೊಟ್ಟಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಷ್ಠಿತ ಕೆ.ಎಲ್.ಇ.ಸಂಸ್ಥೆಗೆ 40 ಲಕ್ಷ ರೂ.ಗಳ ಕೊಡುಗೈ ದಾನಿಗಳಾಗಿ ತಂದೆ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಹೆಸರನ್ನು ಅಜರಾಮರವಾಗಿಸಿದ್ದಾರೆ. ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಹಿಡಿತದಲ್ಲಿದ್ದು ಅವಿರೋಧ ಚುನಾವಣೆ ನಡೆಸುವ ಮೂಲಕ ಸಹಕಾರ ಕ್ಷೇತ್ರದಲ್ಲಿಯೂ ಸಹ ಕ್ರಾಂತಿದಾಯಕ ಹೆಜ್ದೆ ಮೂಡಿಸಿದ್ದು ಅವರ ಕಾರ್ಯ ತತ್ಪರತೆಯ ಪ್ರತೀಕವಾಗಿದೆ.
2008 ರಲ್ಲಿ ಜರುಗಿದ 13 ನೆಯ ಕರ್ನಾಟಕ ವಿಧಾನಸಭೆಗೆ ಚುನಾಯಿತರಾಗಿ ಪುನರ್ ವಿಂಗಡಿತ ಹುಕ್ಕೇರಿ ಮತಕ್ಷೇತ್ರದಿಂದ 5 ನೆಯ ಬಾರಿ ಶಾಸಕರಾಗಿ ಪುನರಾಯ್ಕೆಯಾದರು. ಆದರೆ ಪಕ್ಷದ ಆಂತರಿಕ ನೀತಿಗಳಿಗೆ ಬೇಸತ್ತು 2 ತಿಂಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಉಮೇಶ ಕತ್ತಿ ಅವರಿಗಿದ್ದ ಅಪಾರ ಜನಬೆಂಬಲ ಹಾಗೂ ಪಕ್ಷ ಸಂಘಟನಾ ಚಾತುರ್ಯವನ್ನು ಕಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2008 ರಂದು ತಮ್ಮ ಸಚಿವ ಸಂಪುಟದಲ್ಲಿ ತೋಟಗಾರಿಕೆ ಹಾಗೂ ಬಂದೀಖಾನೆ ಸಚಿವ ಸ್ಥಾನ ನೀಡಿ ರಾಜ್ಯದ ಜನತೆ ಸೇವೆಗೈಯ್ಯಲು ಅವಕಾಶ ಕಲ್ಪಿಸಿಕೊಟ್ಟರು. ನಂತರ ಹುಕ್ಕೇರಿ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಅಭೂತಪೂರ್ವ ಜಯ ಸಾಧಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು.

ತಮ್ಮ ಪ್ರತಿಯೊಂದು ರಾಜಕೀಯ ಜೀವನದಲ್ಲಿ ಅವಿರತ ಹೋರಾಟ ಮಾಡುತ್ತ ವಿಜಯಶಾಲಿಯಾಗಲು ನೆರವಾಗುತ್ತಿದ್ದ ಸಹೋದರ ರಮೇಶ ಕತ್ತಿ ಇವರಿಗೆ 2009 ರ ವರ್ಷದಲ್ಲಿ ಸಾಮಾನ್ಯ ಮತಕ್ಷೇತ್ರವಾಗಿ ಮಾರ್ಪಟ್ಟ ಚಿಕ್ಕೋಡಿ ಲೋಕಸಭೆಗೆ ತಮ್ಮ ಸಹೋದರರ ಹೆಸರನ್ನೇ ಅಭ್ಯರ್ಥಿಯನ್ನಾಗಿ ಸೂಚಿಸಿದಾಗ ರಾಜ್ಯ ಬಿ.ಜೆ.ಪಿ.ಯಲ್ಲಿ ಕಾರ್ಯಕಾರಿಣಿಯಲ್ಲಿ ತೀವ್ರ ಸಂಚಲವನ್ನುಂಟು ಮಾಡಿತು.
ಉಮೇಶ ಕತ್ತಿಯವರ ಸಂಘಟನಾ ಚಾತುರ್ಯ, ರಾಜಕೀಯ ಚಾಣಾಕ್ಷತೆಗಳು ಸಹೋದರ ರಮೇಶ ಕತ್ತಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಕತ್ತಿ ಮನೆತನದ ರಾಜಕೀಯವನ್ನು ನವ ದೆಹಲಿವರೆಗೂ ವಿಸ್ತರಿಸಿದ ಖ್ಯಾತಿ ಪಡೆದುಕೊಂಡಿತು.
2011 ನೇ ಇಸ್ವಿ ಮಾರ್ಚ್ 11-12 ರವರೆಗೆ ವಿಶ್ವವೇ ಬೆರಗಾಗುವಂತೆ ಅದರಲ್ಲೂ ಮರಾಠಿಗರಿಂದಲೂ ಭೇಷ್ ಎನಿಸಿಕೊಂಡು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ವಿಶ್ವ ಕನ್ನಡ ಸಮ್ಮೇಳನದ ಸಮಸ್ತ ಉಸ್ತುವಾರಿ ವಹಿಸಿಕೊಂಡು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಅಪೂರ್ವ ಯಶಸ್ವಿಗೆ ಕಾರಣಕರ್ತರಾಗಿ ಜನಮಾನಸದಲ್ಲಿ ಅಚಲರಾಗಿದ್ದಾರೆ.

1961 ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಹಿರಿಯ ಸಹಕಾರಿ ವಿಶ್ವನಾಥ ಹಾಗೂ ರಾಜೇಶ್ವರಿ ದಂಪತಿಗಳ ಜೇಷ್ಠ ಪುತ್ರನಾಗಿ ಜನಿಸಿ, ಸ್ವಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು, ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು.
ಸಹೋದರ ಮಾಜಿ ಸಂಸದರು, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಸೇರಿದಂತೆ ಇಬ್ಬರು ಸೌ.ಪೂರ್ಣಿಮಾ ಪಾಂಗಿ ಮತ್ತು ಸೌ.ಹರ್ಷ ಕಣವಿ ಇರ್ವರು ತಂಗಿಯರು, ಪತ್ನಿ ಶೀಲಾ, ಓರ್ವ ಪುತ್ರ ನಿಖಿಲ್, ಪುತ್ರಿ ಸ್ನೇಹಾ ಮೊಮ್ಮಕ್ಕಳ್ಳಾದ-ಆರ್ಯನ್, ಅರೈನಾ, ಆರವ, ಅಯಾನ್ಸ್ ಸೇರಿದಂತೆ ಅಪಾರ ಬಂಧು-ಬಳಗ ಇವರ ತುಂಬು ಸಂಸಾರದ ಕರುಳ-ಬಳ್ಳಿಗಳು.
2015ರಲ್ಲಿ ಸಹೋದರ ರಮೇಶ ಕತ್ತಿ ಅವರ ಸುಪುತ್ರ ಪವನ ಕತ್ತಿ ಅವರನ್ನು ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಜಿಲ್ಲಾ ಪಂಚಾಯತಿ ಮತಕ್ಷೇತ್ರದಿಂದ ಹಾಗೂ ತಮ್ಮ ಸುಪುತ್ರ ನಿಖಿಲ್ ಕತ್ತಿ ಅವರನ್ನು ಅಮ್ಮಣಗಿ ಜಿಲ್ಲಾ ಪಂಚಾಯತಿ ಸದಸ್ಯರನ್ನಾಗಿ ಆಯ್ಕೆಗೊಳಿಸುವ ಮೂಲಕ ವಂಶ ಪಾರಂಪರ್ಯ ರಾಜಕಾರಣ ಮುಂದುವರೆಸಿದ್ದಾರೆ. ನಿಖಿಲ ಕತ್ತಿ ಹಾಗೂ ಪವನ ಕತ್ತಿ ಅವರೂ ಸಹ ತಂದೆ ಹಾಗೂ ಚಿಕ್ಕಪ್ಪರಿಂದ ರಾಜಕೀಯ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಳ್ಳುತ್ತಿದ್ದಾರೆ.