ನಟ ಯಶ್ ಕೆಜಿಎಫ್ 1 & 2 ಯಶಸ್ವಿಯಾದ ಬಳಿಕ ಯಾವುದೇ ಸದ್ದು ಗದ್ದಲವಿಲ್ಲದೇ ಹಾಲಿವುಡ್ ಕಡೆಗೆ ಪಯಣ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಧ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಕನ್ನಡದ ಸ್ಟಾರ್ ನಟ ಯಶ್ ಹಲವಾರು ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಲಾಸ್ ಏಂಜಲೀಸ್ನಲ್ಲಿ ಯಶ್ ಎಫ್1 ರೇಸರ್ ಲೀವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಯಶ್ ಎಫ್1 ರೇಸರ್ಗಳೊಂದಿಗೆ ಇರುವ ಚಿತ್ರಗಳು ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಇತ್ತೀಚೆಗೆ ಅಷ್ಟೇ ಯಶ್ ಜನಪ್ರಿಯ ಹಾಲಿವುಡ್ ನಿರ್ದೇಶಕ ಹಾಗೂ ಸಮರ ಕಲೆ ತರಬೇತುದಾರ ಜೆಜೆ ಪೆರ್ರಿ ಜೊತೆ ಕಾಣಿಸಿಕೊಂಡಿದ್ದಾರೆ.ತರನ್ ಟ್ಯಾಕ್ಟಿಕಲ್ಗೆ ಭೇಟಿ ನೀಡಿದ ಯಶ್, ಅಲ್ಲಿ ಗನ್ ಹಿಡಿದು ಶೂಟ್ ಮಾಡಿದ್ದಾರೆ. ಈ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ‘ಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ, ಅದನ್ನು ಗುರುತಿಸುವುದೇ ಸವಾಲು…’ ಎಂದು ಬರೆದುಕೊಂಡಿದ್ದಾರೆ.

ಕೆಜಿಎಫ್ ಸಿನಿಮಾ ದೇಶ – ವಿದೇಶಗಳಲ್ಲಿ ಹಿಟ್ ಆದ ಮೇಲೆ ಮುಂದಿನ ಚಿತ್ರದ ಕುರಿತು ಹಲವಾರು ಸಿನಿಮಾಗಳ, ಹಲವಾರು ನಿರ್ದೇಶಕರ ಹೆಸರುಗಳು ಕೇಳಿಬರಲು ಶುರುವಾದವು. ಅದರಲ್ಲಿಯೂ ತಮಿಳಿನ ಶಂಕರ್ ಜೊತೆ ಸಿನಿಮಾ ಮಾಡುತ್ತಾರೆ ಎಂಬ ವದಂತಿ ಹರಡಿತ್ತು.
ಇದೆಲ್ಲದರ ನಡುವೆ ಯಶ್ ಯಾವ ಸಿನಿಮಾದಲ್ಲಿ ನಟಿಸುವರು ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹಾಲಿವುಡ್ನಲ್ಲಿಯೇ ಸಿನಿಮಾ ಮಾಡುತ್ತಾರಾ ಅಥವಾ ಮುಂದಿನ ತಮ್ಮ ಸಿನಿಮಾದಲ್ಲಿ ಹಾಲಿವುಡ್ನಲ್ಲಿ ಎಫ್1 ರೇಸ್, ಸಮರ ಕಲೆಗಳನ್ನು ಅಳವಡಿಸಿಕೊಳ್ಳುತ್ತಾರಾ ಎಂಬುದರ ಬಗ್ಗೆ ಸಿನಿಮಾ ವಲಯದಲ್ಲಿ ಸಾಕಷ್ಟು ಕುತೂಹಲವಿದೆ.