ಹುಬ್ಬಳ್ಳಿ : ಇತ್ತೀಚೆಗೆ ಹುಬ್ಬಳ್ಳಿಯಲ್ಲಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸರಳವಾಸ್ತು ಚಂದ್ರಶೇಖರ ಗುರೂಜಿಯ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣ ಕುರಿತು ಕೋರ್ಟ್ ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಎಸಿಪಿ ಹಾಗೂ ಮುಖ್ಯ ತನಿಖಾಧಿಕಾರಿಯಾದ ವಿನೋದ ಮುಕ್ತೇದಾರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಅದಕ್ಕಾಗಿ 5 ತನಿಖಾ ತಂಡಗಳನ್ನು ರಚಿಸಿದ್ದು, ಇದೀಗ ಕೋರ್ಟ್ ಗೆ ಸುಮಾರು 800 ಪುಟಗಳಷ್ಟು ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಹಣ, ಬೇನಾಮಿ ಆಸ್ತಿ, ಕೊಲೆ ಮಾಡಿದವರಿಗೆ ಗುರೂಜಿಯು ನೀಡಿರುವ ಮಾನಸಿಕ ಕಿರಿಕಿರಿಯೇ ಕೊಲೆಗೆ ಕಾರಣ ಎಂದು ಜಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ.
ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣಗಳು:
10 ಕೋಟಿ ಬೇನಾಮಿ ಜಮೀನು ಹಂತಕನ ಹೆಸರಿನಲ್ಲಿ ಇದ್ದು, ಅದರ ವ್ಯಾಜ್ಯವೇ ಗುರೂಜಿ ಹತ್ಯೆಗೆ ಕಾರಣ ಎನ್ನಲಾಗಿದೆ. ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ರೆವಿನ್ಯೂ ಕೋರ್ಟ್ ಮೆಟ್ಟಿಲೇರಿದ್ದರು.
ಹಂತಕ ಮಹಾಂತೇಶ ಪರವಾಗಿ ರೆವಿನ್ಯೂ ಕೋರ್ಟ್ ನಲ್ಲಿ ತೀರ್ಪು ಬಂದಿತ್ತು. ಈ ವೇಳೆ ಗುರೂಜಿ ತೀರ್ಪು ಪ್ರಶ್ನಿಸಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಗುರೂಜಿ ಮತ್ತು ಮಹಾಂತೇಶ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ರು. ತನ್ನ ಪ್ರಾಪರ್ಟಿಯನ್ನು ಮಹಾಂತೇಶ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ರು. ಇದಕ್ಕೆ ಹಂತಕರು ಗುರೂಜಿ ಅಪಾರ್ಟ್‍ಮೆಂಟ್‍ನಲ್ಲಿ ರೂಲ್ಸ್ ಬ್ರೇಕ್ ಆಗ್ತಿದೆ ಎಂದು ದೂರು ನೀಡಿದ್ದರು.

ಮಹಾಂತೇಶ ಗ್ರಾಹಕರ ನ್ಯಾಯಾಲಯಕ್ಕೆ ಗುರೂಜಿ ಆಶ್ರಮ ದಲ್ಲಿ ಕಾನೂನುಗಳು ಉಲ್ಲಂಘನೆಯಾಗುತ್ತಿವೆ, ಕ್ರಮ ಕೈಗೊಳ್ಳಬೇಕು ಅಂತ ದೂರು ನೀಡಿದ್ದರು. ಗುರೂಜಿಯು ಈ ದೂರನ್ನು ಹಿಂಪಡೆಯುವಂತೆ ಹಂತಕರಿಗೆ ಒತ್ತಡ, ಮಾನಸಿಕ ಕಿರಿಕಿರಿ ನೀಡಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಇದಾದ ಬಳಿಕವೇ ಹಂತಕರು ಗುರೂಜಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದಿದೆ.
ಸತತ ಮೂರು ತಿಂಗಳಿಂದ ಕೊಲೆಗೆ ಸ್ಕೆಚ್
ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಮಹಾಂತೇಶ ಮತ್ತು ಟೀಂ ಮೂರು ತಿಂಗಳಿನಿಂದ ಪ್ಲಾನ್ ಮಾಡಿದ್ದಾರೆ. ಅದೂ ಸಾರ್ವಜನಿಕವಾಗಿಯೇ ಹತ್ಯೆ ಮಾಡಬೇಕಂತ ಹಿಂಬದಿಯಿಂದ ಕೆಲಸ ಮಾಡಿದ್ದಾರೆ. ಆದರೆ ಅದು ಸಫಲವಾಗಿರಲಿಲ್ಲ. ತಮ್ಮ ಮೊಮ್ಮಗನ ಸಾವಿನಿಂದ ಗುರೂಜಿ ಹುಬ್ಬಳ್ಳಿಗೆ ಬಂದಿದ್ದ ವಿಷಯ ತಿಳಿದ ಆರೋಪಿಗಳು, ಗುರೂಜಿ ಬಂದ ದಿನವೇ ಖಾಸಗಿ ಹೋಟೆಲ್‍ನಲ್ಲಿ ರೂಂ ಪಡೆದು ಹತ್ಯೆಗೆ ಮಾಸ್ಟರ್ ಪ್ಲಾನ್ ಹೂಡಿದ್ದರು. ಹತ್ಯೆ ನಡೆಯುವುದಕ್ಕಿಂತ ಮುನ್ನ ದಿನ ಹಂತಕರು ಗುರೂಜಿಗೆ ಕರೆ ಮಾಡಿ ಸಂದಾನ ಮಾಡಿಕೊಳ್ಳುವ ಎಂದು ಹೇಳಿದ್ದರು.


ಇವರನ್ನು ನಂಬಿದ ಗುರೂಜಿ ಭೇಟಿಯಾಗಲು ಅವಕಾಶ ನೀಡಿದ್ದಾರೆ. ಗುರೂಜಿ ಭೇಟಿಗೆ ಹೋಟೆಲ್‍ಗೆ ಹೋಗಿದ್ದ ಹಂತಕರು, ಬೇನಾಮಿ ಆಸ್ತಿ ಪತ್ರ ಮತ್ತು ಹತ್ಯೆಗಾಗಿ ಚಾಕುವನ್ನು ಒಂದೇ ಕವರ್ ನಲ್ಲಿ ತಂದಿದ್ದರು. ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಚಾಕು ತೆಗೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ತಿಳಿಸಿದ್ದಾರೆ.
#chargesheet #sarala vastu guruji #chandrashekar guruji #murder #mental torture #hubballi #property issue