ಮುಂಬೈ : ಕರ್ನಾಟಕದಿಂದ ಶುರುವಾಗಿ ದೇಶದ ನಾನಾ ಮೂಲೆಗಳಿಗೆ ತಲುಪಿದ ಹಿಜಾಬ್ ವಿವಾದವು ಎಲ್ಲೆಡೆ ವಾತಾವರಣವನ್ನು ಕೆಡಿಸಿತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹಿಜಾಬ್ ಗೆ ವಿರೋಧ ವ್ಯಕ್ತವಾಗುತ್ತಿದ್ದು, ಇರಾನ್ ಮಹಿಳೆಯರು ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ವಿಶ್ವದ ನಾನಾ ಕಡೆಗಳಿಂದ ಬೆಂಬಲ ಸಿಗುತ್ತಿದ್ದು, ಭಾರತದಿಂದ ಹಲವಾರು ಜನರು ಬೆಂಬಲಿಸಿದ್ದಾರೆ. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇರಾನ್ ಮಹಿಳೆಯರ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ.
ಭಾರತದಲ್ಲಿ ಹಿಜಾಬ್ ಹಾಕಬೇಕಾ, ಬೇಡವಾ ಅಂತ ಹಲವಾರು ಆಯಾಮಗಳಲ್ಲಿ ಚರ್ಚೆಗಳು ನಡೆದವು. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಹಲವು ಪರ ಮತ್ತು ವಿರೋಧ ಹೋರಾಟಗಳು ನಡೆದವು. ಸರ್ಕಾರಗಳೇ ಹಿಜಾಬ್ ನಿಷೇಧದ ಪರ ನಿಂತರು. ಇನ್ನೂ, ಮುಸ್ಲಿಂ ಧಾರ್ಮಿಕವಾದಿಗಳು ನಮ್ಮ ಸಂಸ್ಕೃತಿಯ ಮೇಲೆ ಆಳುವ ವರ್ಗ, ಒಂದು ಕೋಮಿನವರು ದಬ್ಬಾಳಿಕೆ ಸಲ್ಲ ಎಂದು ವಾದಿಸಿದರು. ಕೊನೆಗೆ ಅದು ನ್ಯಾಯಾಲಯದ ಮೆಟ್ಟಿಲೇರಿತು. ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಇದರ ಕುರಿತು ವಾದ ಆಲಿಸಿ ತೀರ್ಪು ನೀಡಿತು.
ಇಂತಹ ಸಂದರ್ಭದಲ್ಲಿ ಇರಾನ್ ದೇಶದಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ನಿಯಮದ ಸಂಬಂಧ ಹೋರಾಟ ನಡೆಸುತ್ತಿದ್ದು, ಈಗ ಅದು ತೀವ್ರ ಸ್ವರೂಪ ಪಡೆದುಕೊಂಡು ಒಂದು ತಿಂಗಳು ಕಳೆದಿದೆ. ಅನೇಕ ರಾಷ್ಟ್ರಗಳಿಂದ ಮಹಿಳಾ ಹೋರಾಟಗಾರರು, ಮಹಿಳೆಯರ ಪರವಿರುವ ಎಲ್ಲರೂ ಬೆಂಬಲ ಸೂಚಿಸಿದ್ದರು. ಭಾರತದಿಂದಲೂ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಟಿ ಊರ್ವಶಿ ರೌಟೇಲಾ ಕೂಡ ಸಾಥ್ ನೀಡಿದ್ದಾರೆ.

ನಟಿ ಊರ್ವಶಿ ತಮ್ಮ ತಲೆಗೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಇರಾನ್ ಮಹಿಳೆಯರಿಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ವ್ಯಕ್ತಿ ಸ್ವಾತಂತ್ರ್ಯ ದ ಮೇಲೆ ದಾಳಿ ಸರಿಯಲ್ಲ. ಹಿಜಾಬ್ ಹೆಸರಿನಲ್ಲಿ ನಡೆಯುವ ದೌರ್ಜನ್ಯ ವಿರೋಧಿಸುವೆ. ಹೀಗಾಗಿ, ನಾನು ನನ್ನ ಕೂದಲು ಕತ್ತರಿಸಿಕೊಂಡಿದ್ದೇನೆ. ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್ ವಿರುದ್ಧದ ಹೋರಾಟದಲ್ಲಿ ನಿಧನರಾದ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಖಾಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ಹೀಗೆ ಮಾಡಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಲೆಗೂದಲು ಕತ್ತರಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿರುವ ನಟಿ ಊರ್ವಶಿ, ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಇರುವ ಮಹಿಳೆಯರು ಇರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಒಗ್ಗೂಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.

ಮಹಿಳೆಗೆ ಕೂದಲನ್ನು ಗೌರವದ ಸಂಕೇತವಾಗಿ ಕಾಣಲಾಗುತ್ತದೆ. ಆದರೆ, ಸಮಾಜದಲ್ಲಿ ನಡೆಯುವ ಕ್ರೌರ್ಯವನ್ನು ನಾನು ಒಪ್ಪಲ್ಲ. ಹೀಗಾಗಿ, ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಸಮಾಜ ಹೇರಿರುವ ಸೌಂದರ್ಯದ ಪರಿಕಲ್ಪನೆಯನ್ನು ತಾವು ಕೇರ್ ಮಾಡುವುದಿಲ್ಲ ಎಂದು ಮಹಿಳೆಯರು ತೋರಿಸುತ್ತಿದ್ದಾರೆ. ನಾವು ಯಾವ ಬಟ್ಟೆ ಹಾಕಬೇಕು, ಹೇಗಿರಬೇಕು, ಹೇಗೆ ನಡ್ಕೋಬೇಕು, ಹೇಗೆ ಜೀವಿಸಬೇಕಂತ ಬೇರೆಯವರು ನಿರ್ಧರಿಸುವುದು ಸರಿಯಲ್ಲ. ಅದಕ್ಕೆ ಯಾರು ಅವಕಾಶ ಕೊಡಬೇಡಿ. ಮಹಿಳೆಯರು ಎಲ್ಲರೂ ಒಂದಾದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಅವರು ಹೇಳಿಕೊಂಡಿದ್ದಾರೆ.