ಆಸ್ಚ್ರೇಲಿಯಾ : ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಟೀಂ ಇಂಡಿಯಾ, ಸಂಘಟಿತ ಪ್ರದರ್ಶನದ ಮೂಲಕ ಮುನ್ನಡೆಯುವ ದೊಡ್ಡ ಮುನ್ಸೂಚನೆ ನೀಡಿದೆ.
ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೆನ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಆಟಗಾರರು, ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 6 ರನ್‌ಗಳ ಅದ್ಭುತ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಪರ ಕೆ.ಎಲ್. ರಾಹುಲ್(57) ಹಾಗೂ ಸೂರ್ಯಕುಮಾರ್ ಯಾದವ್(50) ಅರ್ಧಶತಕ ಸಿಡಿಸಿ ಮಿಂಚಿದರೆ.
ನಾಯಕ ರೋಹಿತ್ ಶರ್ಮ(15) ನಿರೀಕ್ಷಿತ ಆಟವಾಡದಿದ್ದರು, ರಾಹುಲ್ ಜೊತೆಗೂಡಿ 78 ರನ್‌ಗಳ ಮೊದಲ ವಿಕೆಟ್ ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ(19) ಹಾಗೂ ದಿನೇಶ್ ಕಾರ್ತಿಕ್(20) ಸಹ ಬಿರುಸಿನ ಆಟದ ಮೂಲಕ ಉಪಯುಕ್ತ ರನ್‌ಗಳಿಸಿ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯ ಬಹುಬೇಗನೆ ವಿಕೆಟ್ ಒಪ್ಪಿಸಿ, ನಿರಾಸೆ ಮೂಡಿಸಿದರು. ಆದರೆ ಸಂಘಟಿತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ, ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು.
ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳು ಸಹ ಸಂಘಟಿತ ಪ್ರದರ್ಶನದ ಮೂಲಕ ಮಿಂಚಿದರು. ಆರಂಭದಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟರು, ನಂತರದಲ್ಲಿ ಮೇಲುಗೈ ಸಾಧಿಸಿದ ಬೌಲರ್‌ಗಳು, ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಬೌಲಿಂಗ್ ಸಾರಥ್ಯವಹಿಸಲಿರುವ ಮೊಹಮ್ಮದ್ ಶಮಿ(4/3) ಒಂದೇ ಓವರ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿ ಗಮನ ಸೆಳೆದರು. ಉಳಿದಂತೆ ಭುವನೇಶ್ವರ್ ಕುಮಾರ್ 2, ಅರ್ಶದೀಪ್, ಹರ್ಷಲ್ ಪಟೇಲ್ ಹಾಗೂ ಚಹಲ್ ತಲಾ 1 ಉತ್ತಮ ಬೌಲಿಂಗ್‌ನಿಂದ ಮಿಂಚಿದರು.

ಒಟ್ಟಾರೆ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಂಘಟಿತ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಗೆಲುವಿನ ಖುಷಿಯೊಂದಿಗೆ ಟಿ20 ವಿಶ್ವಕಪ್‌ನತ್ತ ಮುಖ ಮಾಡಿದೆ. ಅ.19ರಂದು ನ್ಯೂಜಿ಼ಲೆಂಡ್ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ಆಡಲಿರುವ ಭಾರತ, ಮತ್ತೊಂದು ಜಯದ ಮೂಲಕ ಟಿ20 ವಿಶ್ವಕಪ್‌ನ ಸೂಪರ್-12 ಹಂತಕ್ಕೆ ಗ್ರ್ಯಾಂಡ್ ಎಂಟ್ರಿಕೊಡುವ ಲೆಕ್ಕಾಚಾರದಲ್ಲಿದೆ.