ಕಿರಣ.ಆರ್ – ಪತ್ರಕರ್ತರು
ಯುರೋಪಿಯನ್ ಒಕ್ಕೂಟದಿಂದ (ಬ್ರೆಕ್ಸಿಟ್) ಹೊರಬಂದ ಬಳಿಕ ಬ್ರಿಟನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬಿಕ್ಕಟ್ಟು ಎದುರುಗೊಂಡಿದ್ದು, ಸೂರ್ಯ ಮುಳುಗದ ಸಾಮ್ರಾಜ್ಯ ಎಂದೆನಿಸಿಕೊಂಡಿದ್ದ ನಾಡಿನಲ್ಲೀಗ ಕತ್ತಲು ಆವರಿಸಿಕೊಂಡಿದೆ.
ಪ್ರಪಂಚದಾದ್ಯಂತ ತನ್ನ ಆಧಿಪತ್ಯ ಸ್ಥಾಪಿಸಿದ್ದ ಬ್ರಿಟನ್ ಇದೀಗ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದೆ. ಬ್ರೆಕ್ಸಿಟ್ ನಂತರ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶ ರಾಜಕೀಯವಾಗಿಯೂ ಸತತವಾಗಿ ಅಸ್ಥಿರತೆ ಎದುರಿಸುತ್ತಿದೆ.
ಯುರೋಪಿಯನ್ ಒಕ್ಕೂಟದಿಂದ (ಬ್ರೆಕ್ಸಿಟ್) ಹೊರಬಿದ್ದು 7 ವರ್ಷಗಳು ಕಳೆಯುತ್ತಿದೆ. ಆದರೆ, ಈ ಅವಧಿಯಲ್ಲಿ ಸುಮಾರು 5 ಪ್ರಧಾನಿಗಳನ್ನು ಕಂಡಿದ್ದು, ಇದೀಗ 6 ನೇ ಪ್ರಧಾನಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ 4 ಪ್ರಧಾನಿಗಳು ಬದಲಾಗಿದ್ದಾರೆ.

ಇದು ಅಲ್ಲಿನ ದುಸ್ಥಿತಿಯನ್ನು ತೋರಿಸುತ್ತದೆ. ಕನ್ಸರ್ವೇಟೀವ್ ಪಕ್ಷದ 4ನೇ ಪ್ರಧಾನಿಯಾಗಿದ್ದ ಲಿಜ್ ಟ್ರಸ್, ಆರ್ಥಿಕ ಕುಸಿತದಿಂದ ದೇಶವನ್ನು ಹೊರತರಲಾಗದ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ದೇಶದ ರಾಜಕೀಯ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ.

ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವ ಸಂಬಂಧ ಜನರ ಬೆಂಬಲ ಕೋರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅಲ್ಲಿಂದ ಆರಂಭವಾದ ರಾಜೀನಾಮೆ ಪರ್ವ ಇನ್ನೂ ನಿಂತಿಲ್ಲ. ಅದಾದ ಮೇಲೆ 2019 ರಲ್ಲಿ ಥೆರೆಸಾ ರಾಜೀನಾಮೆ ನೀಡಿದರು. ಆಮೇಲೆ ಅಧಿಕಾರಕ್ಕೆ ಬಂದ ಬೋರಿಸ್ ಜಾನ್ಸನ್ 2022 ರಲ್ಲಿ ರಾಜೀನಾಮೆ ನೀಡಿದ್ದಾರೆ. ಇದೀಗ ಪ್ರಸ್ತುತ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿ ರಾಜೀನಾಮೆ ಸಲ್ಲಿಸಿದ್ದು, ಬ್ರಿಟನ್ ಸಂಕಷ್ಟದ ಸ್ಥಿತಿಗೆ ತಲುಪಿದೆ.
ಬ್ರಿಟನ್ ಗೆ ಆರ್ಥಿಕ ಸಂಕಷ್ಟ
ಸಾಮಾನ್ಯವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯಾವುದೇ ದೇಶವೂ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಅಂತಹುದರಲ್ಲಿ ಬ್ರಿಟನ್ ಎಂಬ ಬೃಹತ್ ರಾಷ್ಟ್ರವು ಯೂರೋಪ್ ಒಕ್ಕೂಟದಿಂದ ಬಿಡಿಸಿಕೊಂಡು 5 ವರ್ಷಗಳ ಬಳಿಕವೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಬ್ರಿಟನ್‌ನ ಆರ್ಥಿಕ ಸಂಕಷ್ಟಕ್ಕೆ ಕೋವಿಡ್ ಸಾಂಕ್ರಾಮಿಕ ಕಾರಣ ಎನ್ನಲಾಗುತ್ತದೆ. ಆದರೆ ವಾಸ್ತವವಾಗಿ ಬ್ರೆಕ್ಸಿಟ್ ಮತ್ತು ಆನಂತರ ಒಪ್ಪಂದಗಳೇ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಡಾಲರ್ ಎದುರು ನಿರಂತರವಾಗಿ ಕುಸಿತ ಕಾಣುತ್ತಿರುವ ಪೌಂಡ್ ಅನ್ನು ಮೇಲೆತ್ತಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದರಲ್ಲಿ ಸಫಲವಾಗುತ್ತಿಲ್ಲ ಎಂದು ವಿಶ್ಲೇಷಣೆಗಳು ಅಭಿಪ್ರಾಯ ಪಟ್ಟಿವೆ. ಸಧ್ಯ ಡಾಲರ್ ಮುಂದೆ ಪೌಂಡ್ ಮೌಲ್ಯ 1.03 ಇದ್ದು, ಇದುವರೆಗಿನ ಕನಿಷ್ಟ ಮೌಲ್ಯವಾಗಿದೆ.

ಬ್ರೆಕ್ಸಿಟ್‌ನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ವ್ಯಾಪಾರದಲ್ಲಿ ಏಕಸ್ವಾಮ್ಯತೆ ಸಾಧಿಸುವ ಉದ್ದೇಶದಿಂದ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಒಡ್ಡಿಕೊಂಡಾಗಿನಿಂದಲೂ ಆರ್ಥಿಕ ಸಮಸ್ಯೆ ಎದುರಿಸುತ್ತಲೇ ಇದೆ. ಬ್ರೆಕ್ಸಿಟ್‌ಗೂ ಮೊದಲು ಬ್ರಿಟನ್‌ನ 1 ಪೌಂಡ್ ಅಮೆರಿಕದ 1.8 ಡಾಲರ್‌ಗೆ ಸಮನಾಗಿತ್ತು. ಬ್ರೆಕ್ಸಿಟ್ ಘೋಷಣೆಯಾಗುತ್ತಿದ್ದಂತೆ ಇದು 1.5 ಡಾಲರ್‌ಗೆ ಕುಸಿತ ಕಂಡಿತು. ಈಗ ಪೌಂಡ್ ಮೌಲ್ಯ 1.3 ಡಾಲರ್‌ಗೆ ಕುಸಿತ ಕಂಡಿದೆ. ಬ್ರೆಕ್ಸಿಟ್ ಬಳಿಕ ವಿದೇಶಿ ವ್ಯವಹಾರವನ್ನು ಡಾಲರ್‌ನಲ್ಲೇ ನಡೆಸಬೇಕಾದ ಕಾರಣ ಹೆಚ್ಚಿನ ಹಣವನ್ನು ವೆಚ್ಚ ಮಾಡಬೇಕಾಯಿತು. ಹೀಗಾಗಿ ವಿದೇಶಿ ವಿನಿಮಯವೂ ಬೇಗ ಸಹ ಕರಗಿತು. ಒಕ್ಕೂಟದಿಂದ ಹೊರ ಬಂದ ಬಳಿಕ ಬ್ರಿಟನ್ ಮಾಡಿಕೊಂಡ ಒಪ್ಪಂದಗಳು ಸಹ ದೇಶಕ್ಕೆ ಮುಳುವಾಗಿ ಪರಿಣಮಿಸಿತು.
ಬ್ರಿಟನ್ ನಲ್ಲಿ ಭಾರತದಲ್ಲಿನ ಸಂಸದೀಯ ಮಾದರಿಯಿದ್ದು, 5 ವರ್ಷಕ್ಕೊಮ್ಮೆ ಎಲೆಕ್ಷನ್ ನಡೆಯುತ್ತದೆ. ಅದರಂತೆ ಡಿ.12, 2019 ರಂದು ಚುನಾವಣೆ ನಡೆದಿದ್ದು, ಈ ಅವಧಿಯು ಜನವರಿ 2025 ಅಧಿಕಾರವಧಿ ಇರಲಿದೆ. ಈ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು 80 ಸೀಟುಗಳನ್ನು ಗೆದ್ದು ಬಹುಮತ ಪಡೆದಿತ್ತು.

ಈಗ ಪ್ರಸ್ತುತ ಗೆದ್ದಿರುವ ಪಕ್ಷಕ್ಕೆ ಅಧಿಕಾರ ನಡೆಸಲು ಇನ್ನೂ 3 ವರ್ಷಗಳ ಕಾಲ ಕಾಲಾವಕಾಶ ಇದೆ. ಆದರೆ, ಬ್ರಿಟನ್ ನಲ್ಲಿ ಅಧಿಕಾರ ಅಸ್ಥಿರತೆ ಎದ್ದು ಕಾಣುತ್ತಿದೆ. ಇನ್ನೊಂದು ಕಡೆ ವಿಪಕ್ಷವಾಗಿರುವ ಲೇಬರ್ ಪಾರ್ಟಿ ಅವಧಿಪೂರ್ವ ಚುನಾವಣೆ ಘೋಷಿಸಲು ಒತ್ತಾಯ ಮಾಡುತ್ತಿದೆ.
ಇನ್ಫೋಸಿಸ್ ಅಳಿಯನಿಗೆ ಪ್ರಧಾನಿ ಪಟ್ಟ
ಬ್ರಿಟನ್ ಪ್ರಧಾನಿ ರಾಜೀನಾಮೆ ನೀಡುತ್ತಿದ್ದಂತೆ ಹೊಸ ಪ್ರಧಾನಿ ಪ್ರಕ್ರಿಯೆ ಶುರುಗೊಂಡಿದೆ. ಅದಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅದರ ಬೆನ್ನಲ್ಲೇ ಇನ್ಪೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಹೌಸ್ ಆಫ್ ಕಾಮನ್ಸ್‌ನಲ್ಲಿ ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್, ರಕ್ಷಣಾ ಸಚಿವ ಬೆನ್ ವಾಲ್ಲೆಸ್, ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ, ಬುಧವಾರವಷ್ಟೇ ರಾಜೀನಾಮೆ ನೀಡಿದ್ದ ಸುಯೆಲ್ಲಾ ಬ್ರೇವರ್ಮನ್ ಪ್ರಧಾನಿ ಹುದ್ದೆಯ ಮೇಲೆ ಆಕಾಂಕ್ಷಿಗಳು ಎನ್ನಲಾಗಿದೆ. ಎಲ್ಲರೂ ತಮ್ಮ ತಮ್ಮ ಬೆಂಬಲಿಗರ ಮೂಲಕ ಪ್ರಚಾರಕ್ಕಿಳಿದಿದ್ದಾರೆ.
ಒಂದು ವೇಳೆ ರಿಷಿ ಸುನಕ್ ಆಯ್ಕೆಯಾದರೆ ಭಾರತವನ್ನು ಆಳ್ವಿಕೆ ನಡೆಸಿ, ಇಲ್ಲಿನ ಸಂಪತ್ತನ್ನೆಲ್ಲಾ ದೋಚಿಕೊಂಡು ಹೋದ ಕತ್ತಲಾಗದ ಸಾಮ್ರಾಜ್ಯಕ್ಕೆ ಭಾರತೀಯನೊಬ್ಬ ದಂಡನಾಯಕನಾದ ಕೀರ್ತಿಗೆ ಪಾತ್ರರಾಗಲಿದ್ದಾರೆ.
#britain #prime minister #political and finance crisis #luz truss resigned #rishi sunak #conservative party #