Yadadri Temple : ತೆಲಂಗಾಣದ ಯಾದಾದ್ರಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲಕ್ಕೆ ಹಸಿರು ಆರಾಧನಾ ಸ್ಥಳವೆಂಬ ಗರಿ

ಹೈದರಾಬಾದ್: ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಗಿರಿಗುಟ್ಟವೆಂಬ ಗುಡ್ಡದ ಮೇಲಿರುವ ಶ್ರೀ ಲಕ್ಷ್ಮೀ ನೃಸಿಂಹ(ನರಸಿಂಹ) ಸ್ವಾಮಿ ದೇವಾಲಯಕ್ಕೆ ಭಾರತದ ಹಸಿರು ಕಟ್ಟಡ ಪ್ರಾಧಿಕಾರದಿಂದ (ಐಜಿಬಿಸಿ) “ಹಸಿರು ಆರಾಧನಾ ಸ್ಥಳ” (ಗ್ರೀನ್‌ ಪ್ಲೇಸ್‌ ಆಫ್‌ ವರ್ಷಿಪ್‌) ಎಂಬ ಪ್ರಶಸ್ತಿ ನೀಡಿದೆ. 2022-2025ರ ಸಾಲಿಗೆ ಈ ಪ್ರಶಸ್ತಿಯನ್ನು ಯಾದಾದ್ರಿ ಅಥವಾ ಯಾದಗಿರಿಗುಟ್ಟ ದೇಗುಲವೆಂದು ಕರೆಯಲ್ಪಡುವ ಈ ದೇವಾಲಯಕ್ಕೆ ನೀಡಲಾಗಿದೆ.

ಭಾರತದ ಹಸಿರು ಕಟ್ಟಡ ಪ್ರಾಧಿಕಾರ ಪ್ರಶಸ್ತಿ ನೀಡಿದೆ

“ಭಾರತದ ಹಸಿರು ಕಟ್ಟಡ ಪ್ರಾಧಿಕಾರದ 11 ನಿಯಮಗಳನ್ನು ಪಾಲಿಸುವ ಕಾರಣಕ್ಕಾಗಿ ದೇವಾಲಯಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ದೇಗುಲದ ಗುಹೆಯಲ್ಲಿ ಸ್ವಯಂಭೂ ಮೂರ್ತಿಯನ್ನು ಸ್ಪರ್ಶಿಸಲಾಗುವುದಿಲ್ಲ., ದೇವಾಲಯದ ಆವರಣದ ಹೊರಗಿನ ಬಂಡೆಯ ಸಂರಕ್ಷಣೆ ಮಾಡಲಾಗಿದೆ. ವಿನೂತನ ಏರ್‌ಕಂಡಿಷನ್‌ ವಿನ್ಯಾಸದಿಂದಾಗಿ ದೇವಾಲಯದ ಗೋಡೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆʼʼ ಎಂದು ಯಾದಗಿರಿಗುಟ್ಟ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮತ್ತು ಸಿಇಒ ಜಿ.ಕಿಶನ್‌ ರಾವ್‌ ಹೇಳಿದ್ದಾರೆ.

ದೇಗುಲ ಸಂಕಿರ್ಣದ ಶೇಕಡ 40ರಷ್ಟು ಭಾಗವು ಹಸಿರುಮಯವಾಗಿದೆ

“ದೇವಾಲಯದೊಳಗೆ ಸೂರ್ಯನ ಬೆಳಕು ಬರುವಂತೆ ವಿಶಿಷ್ಟವಾಗಿ ನಳಿಕೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರಿಂದ ಹಗಲು ನೈಸರ್ಗಿಕ ಬೆಳಕನ್ನು ಪಡೆಯಲು ಸಾಧ್ಯವಾಗುತ್ತದೆ. ತಾಜಾ ಗಾಳಿ, ನಿರಂತರವಾಗಿ ಸಹಜ ಬೆಳಕನ ವ್ಯವಸ್ಥೆಯು ಪರಿಸರಕ್ಕೆ ಪೂರಕವಾಗಿದೆ. ವಿದ್ಯುತ್‌ ಬಳಕೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ. “ದೇಗುಲ ಸಂಕಿರ್ಣದ ಶೇಕಡ 40ರಷ್ಟು ಭಾಗವು ಹಸಿರುಮಯವಾಗಿದೆ. ಇದು ಪರಿಸರ ವ್ಯವಸ್ಥೆಗೆ ಪೂರಕವಾಗಿದೆ. ದೇವಾಲಯದ ಪುಷ್ಕರಣಿಯು ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತದೆ. ಹಸಿರು ಪ್ರಾಧಿಕಾರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ. ಅಖಂಡ ಆಂಧ್ರ ಪ್ರದೇಶ ಎರಡು ರಾಜ್ಯವಾದ ಬಳಿಕ ದೇಶದ ಶ್ರೀಮಂತ ದೇಗುಲ ಆಂಧ್ರಪ್ರದೇಶ ಪಾಲಾಯಿತು. ಈ ಸಮಯದಲ್ಲಿ ತಿರುಪತಿ ದೇಗುಲಕ್ಕೆ ಸರಿಸಮಾನದ ದೇವಾಲಯ ತೆಲಂಗಾಣದಲ್ಲಿಯೂ ಇರಬೇಕು ಎಂಬ ಸಂಕಲ್ಪವನ್ನು ಮಾಡಲಾಯಿತು.

ಕಾಕತೀಯ ರಾಜವಂಶಸ್ಥರಿಂದ 1400 ಎಕರೆ ವಿಶಾಲ ಪ್ರದೇಶದಲ್ಲಿ ದೇಗುಲ ನಿರ್ಮಾಣ

ಇದಕ್ಕಾಗಿ ಯಾದಾದ್ರಿ ದೇಗುಲದ ಮರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ತಿರುಪತಿ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿ ಯಾದಾದ್ರಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಈ ದೇಗುಲವು ಸುಮಾರು 1400 ಎಕರೆ ಪ್ರದೇಶದಲ್ಲಿದೆ. ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಹೋಲಿಕೆಯಾಗುವಂತೆ ಯಾದಾದ್ರಿ ದೇಗುಲದ ಸುತ್ತವೂ ಒಂಬತ್ತು ಬೆಟ್ಟಗಳಿವೆ. ಯಾದಾದ್ರಿ ದೇವಾಲಯವು ನಿತ್ಯಹರಿದ್ವರ್ಣ ಕಾಡಿನಿಂದ ಆವೃತ್ತಗೊಂಡಿದೆ.

ಕಾಕತೀಯ ರಾಜವಂಶದ ದೇಗುಲವಾಗಿರುವುದರಿಂದ ಈ ದೇವಾಲಯದ ಮರು ಅಭಿವೃದ್ಧಿ ಸಮಯದಲ್ಲಿ ಆ ಕಾಲದ ವಿನ್ಯಾಸಗಳನ್ನೇ ಮರು ರಚನೆ ಮಾಡಲಾಗಿತ್ತು.

More News

You cannot copy content of this page