ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಬಾತುಕೋಳಿ, ಕೋಳಿ, ಗವುಜುಗ ಸೇರಿದಂತೆ ಸಾಕು ಪಕ್ಷಿಗಳ ಮೊಟ್ಟೆ, ಮಾಂಸ ಸೇವನೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ.
ಏವಿಯನ್ ವೈರಸ್ ಶಂಕೆಯಿಂದ ಸತ್ತ ಪಕ್ಷಿಗಳ ಮಾದರಿಗಳ ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ನ್ಯಾಷನಲ್ ಅನಿಮಲ್ ಡಿಸೀಸ್ ಸಂಸ್ಥೆಗೆ ರವಾನಿಸಲಾಗಿತ್ತು. ಈ ಪರೀಕ್ಷಾ ವರದಿಯಲ್ಲಿ ಸೋಂಕು ಹರಡಿರುವುದು ಗೊತ್ತಾಗಿದೆ. ಆದ್ದರಿಂದ ಶನಿವಾರದಿಂದ ರೋಗ ಹಬ್ಬಿದ ಮೂಲ ಸ್ಥಳದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲ ಬಾತುಕೋಳಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20,471 ಬಾತುಕೋಳಿಗಳ ಕೊಲ್ಲುವ ಕಾರ್ಯ
ಒಟ್ಟಾರೆ 20,471 ಬಾತುಕೋಳಿಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ ತಲಾ 10 ಸದಸ್ಯರನ್ನು ಒಳಗೊಂಡ ಎಂಟು ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಪಶುವೈದ್ಯರ ನಿರ್ದೇಶನ ಮತ್ತು ಕೇಂದ್ರ ಸರ್ಕಾರದ ನಿಯಮಗಳ ಅನುಸಾರವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಿ.ಎಸ್.ಬಿಂಧು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸೋಂಕಿತ ಪ್ರದೇಶಗಳಿಗೆ ಕಂದಾಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಾತುಕೋಳಿಗಳ ಕೊಲ್ಲುವ ಕಾರ್ಯಾಚರಣೆಗಳು ಪೂರ್ಣಗೊಂಡ ನಂತರವೂ ಹರಿಪಾದ್ ಪುರಸಭೆ, ಪಲ್ಲಿಪಾಡ್ ಪಂಚಾಯಿತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಾರದವರೆಗೆ ಆರೋಗ್ಯ ಮತ್ತು ಪಶು ಕಲ್ಯಾಣ ಇಲಾಖೆಗಳು ನಿಗಾ ವಹಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಗಾಗಲೇ ರೋಗ ಹರಡಿದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಪಕ್ಷಿಗಳ ಸಾಗಣೆಗೆ ನಿಷೇಧ ಹೇರಲಾಗಿದೆ. ಜೊತೆಗೆ ಹರಿಪಾದ್ ಪುರಸಭೆ ಹಾಗೂ ಸಮೀಪದ ವಿವಿಧ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಬಾತುಕೋಳಿ, ಕೋಳಿ, ಗವುಜುಗ ಸೇರಿದಂತೆ ಸಾಕು ಪಕ್ಷಿಗಳ ಮೊಟ್ಟೆ, ಮಾಂಸ ಸೇವನೆ ಹಾಗೂ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪಕ್ಷಿಗಳ ಮೊಟ್ಟೆ ಮತ್ತು ಮಾಂಸವನ್ನು ಮಾರಾಟ ಅಥವಾ ಸೇವನೆ ನಿಷೇಧ

ಇದಲ್ಲದೇ, ದೇಶೀಯ ಪಕ್ಷಿಗಳ ಮೊಟ್ಟೆ ಮತ್ತು ಮಾಂಸವನ್ನು ಮಾರಾಟ ಅಥವಾ ಸೇವನೆಯನ್ನು ತಡೆಯಲು ಬರ್ಡ್ ಸ್ಕ್ವಾಡ್ನ ನಾಲ್ಕು ಸದಸ್ಯರ ತಂಡವನ್ನೂ ರಚಿಸಲಾಗಿದೆ. ಪಕ್ಷಿಗಳಿಂದ ಮನುಷ್ಯರಿಗೆ ಈ ಸೋಂಕು ಹರಡುವ ಸಾಧ್ಯತೆಗಳಿದೆ. ಬಾತುಕೋಳಿಗಳಲ್ಲದೆ, ಕೋಳಿಗಳು, ಗವುಜುಗ, ಹೆಬ್ಬಾತುಗಳು ಮತ್ತು ಇತರ ಪಕ್ಷಿಗಳಿಗೂ ಸೋಂಕು ತಗಲುತ್ತದೆ ಮತ್ತು ಇವುಗಳೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಜನತೆ ಕೂಡ ಹೆಚ್ಚು ಜಾಗರೂಕರಾಗಿರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.