ವಿಶ್ವಸಂಸ್ಥೆ: ಭಾರತ ಆಯೋಜಿಸಲಿರುವ ಎರಡು ದಿನಗಳ ಯುಎನ್‌ಎಸ್‌ಸಿ ಭಯೋತ್ಪಾದನೆ ನಿಗ್ರಹ ಸಮಾವೇಶವು, ಜಾಗತಿಕ ಪಿಡುಗಿನ ವಿರುದ್ಧ ಹೋರಾಡಲು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಮಹತ್ವದ ಸಭೆಯಾಗಿದೆ ಎಂದು ಅಮೆರಿಕ ಬಣ್ಣಿಸಿದೆ.

ಅ. 28-29 ರಂದು ಮುಂಬೈ ಮತ್ತು ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಕ್ರಿಸ್ ಲು ಅವರು ಅಮೆರಿಕ ನಿಯೋಗದ ಮುಖ್ಯಸ್ಥರಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೊದಲ ಬಾರಿಗೆ ಭಾರತ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ (ಸಿಟಿಸಿ) ವಿಶೇಷ ಸಭೆ ಆಯೋಜಿಸುತ್ತಿದೆ. ಇದು ‘ಭಯೋತ್ಪಾದಕ ಉದ್ದೇಶಗಳಿಗೆ ಹೊಸ ಮತ್ತು ವಿನೂತನ ತಂತ್ರಜ್ಞಾನಗಳ ಬಳಕೆ ವಿರುದ್ಧ ಹೋರಾಟ’ ಎಂಬ ಪ್ರಮುಖ ವಿಷಯ ಕುರಿತು ಚರ್ಚಿಸುತ್ತದೆ.