ಮಂಡ್ಯ : ಲಿಂಗಾಯಿತರು, ಒಕ್ಕಲಿಗರು ಇದಾದ ಬಳಿಕ ವಿಶ್ವಕರ್ಮರಲ್ಲಿ ಮೀಸಲಾತಿ ಕೂಗು ಎದ್ದಿದ್ದು, ಮೀಸಲಾತಿ ಸಿಗುವವರೆಗೂ ಹೋರಾಟ ಮಾಡಲು ವಿಶ್ವಕರ್ಮ ಸಮುದಾಯದವರು ಮುಂದಾಗಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಮೀಸಲಾತಿ ಹೋರಾಟದ ಕುರಿತು ಹೇಳಿಕೆ ನೀಡಿದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ ಪಿ ನಂಜುಂಡಿ, ನಮ್ಮ ಸಮಾಜಕ್ಕೆ ಮೀಸಲಾತಿ ಬೇಕು, ಅದರ ಬಗ್ಗೆ ಹೋದಲ್ಲೆಲ್ಲ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ತಿಳಿಸಿದರು.
ಮೀಸಲಾತಿಗಾಗಿ ಸುಮಾರು 50 ಸಾವಿರ ಸಮಾಜದ ಜನರು ನಡಿಗೆ ಮಾಡಲಿದ್ದೇವೆ, ಬೀದರ್ ನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜನವರಿ ಅಥವಾ ಫೆಬ್ರವರಿಯಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ ಅವರು, ಪಕ್ಷ ನನ್ನನ್ನ ಕಡೆಗಣಿಸಿರುವ ಬಗ್ಗೆ ನನಗೆ ಗೊತ್ತಿಲ್ಲ, ನಮ್ಮ ಪಕ್ಷ ನನ್ನನ್ನ ಎಂಎಲ್‌ಸಿ ಮಾಡಿತ್ತು, ನಾನು ಪಕ್ಷದ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇದು ಪಕ್ಷದ ವಿರುದ್ಧದ ಹೋರಾಟವಲ್ಲ, ಸಮುದಾಯದ ಪರ ಹೋರಾಟ ಇದಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ನಾನು ಯಡಿಯೂರಪ್ಪ ಅವರ ಜೊತೆ ಪರಿವರ್ತನಾ ಯಾತ್ರೆಯಲ್ಲಿ ಕೆಲಸ ಮಾಡಿದ್ದೇನೆ, ಯಡಿಯೂರಪ್ಪ ಅವರ ಟೈಮ್ ಚೆನ್ನಾಗಿತ್ತು ಸಿಎಂ ಆದ್ರು, ನನ್ನ ಟೈಮ್ ಸರಿ ಇರಲಿಲ್ಲ ಅನಿಸುತ್ತೆ ಅದಕ್ಕೆ ನಾನು ಹೀಗೆ ಇದ್ದೇನೆ ಎಂದು ಸಮಜಾಯಿಸಿ ನೀಡಿದರು.
#k p nanjundi #vishwa karma #reservation #deamand #padayathre