ನವದೆಹಲಿ: ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನ ನೂತನ ಮಾಲೀಕ ಎಲಾನ್ ಮಸ್ಕ್ ಅವರನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ಟ್ವಿಟ್ಟರ್ ಇನ್ನು ಮುಂದೆ ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ಇರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಟ್ವಿಟ್ಟರ್‌ನ ನೂತನ ಮಾಲೀಕ ಎಲಾನ್ ಮಸ್ಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದ್ವೇಷದ ಭಾಷಣದ ವಿರುದ್ಧ ಟ್ವಿಟ್ಟರ್ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ. ಅದೇ ರೀತಿ ಸತ್ಯವನ್ನು ಹೆಚ್ಚು ದೃಢವಾಗಿ ಪರಿಶೀಲಿಸುತ್ತದೆ ಮತ್ತು ಸರ್ಕಾರದ ಒತ್ತಡದಿಂದಾಗಿ ಭಾರತದಲ್ಲಿ ಇನ್ನು ಮುಂದೆ ವಿರೋಧದ ಧ್ವನಿಯನ್ನು ಹತ್ತಿಕ್ಕುವುದಿಲ್ಲ ಎಂಬ ಭರವಸೆ ಇದೆ..’ ಎಂದು ಮಾರ್ಮಿಕವಾಗಿ ಹೇಳಿದ್ಧಾರೆ.
ರಾಹುಲ್ ಗಾಂಧಿ ಮೊದಲಿನಿಂದಲೂ ಟ್ವಿಟ್ಟರ್ ಭಾರತದಲ್ಲಿ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇಲ್ಲಿನ ಸರ್ಕಾರದ ಒತ್ತಡಕ್ಕೆ ಮಣಿದು, ಸರ್ಕಾರದ ವಿರುದ್ಧದ ಧ್ವನಿಯನ್ನು ಅಡಗಿಸುವಲ್ಲಿ ಟ್ವಿಟ್ಟರ್ ನಿರತವಾಗಿದೆ ಎಂಬುದು ರಾಹುಲ್ ಗಾಂದಿ ಆರೋಪವಾಗಿದೆ.
Congrats @elonmusk.
— Rahul Gandhi (@RahulGandhi) October 28, 2022
I hope @Twitter will now act against hate speech, fact check more robustly, and will no longer stifle the opposition’s voice in India due to government pressure. pic.twitter.com/j2unZeYYj6
ಇದಕ್ಕೆ ಪುಷ್ಠಿಯಾಗಿ ತಮ್ಮ ಟ್ವಿಟ್ಟರ್ ಅಕೌಂಟ್‌ನ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ನನ್ನ ಫಾಲೋವರ್ಸ್ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸಲಾಗುತ್ತಿದೆ ಎಂದು ಹೇಳಿದ್ಧಾರೆ. ಅದೇ ರೀತಿ ಆಡಳಿತದಲ್ಲಿರುವ ನಾಯಕರ ಫಾಲೋವರ್ಸ್ ಸಂಖ್ಯೆ ಕೂಡ ವಾಸ್ತವಿಕತೆಗೆ ದೂರವಾಗಿದೆ ಎಂಬುದು ರಾಹುಲ್ ಗಾಂಧಿ ಅವರ ಅನಿಸಿಕೆಯಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ಮೇಲೆ ಟ್ವಿಟ್ಟರ್ ಯಾವುದೇ ನಿಯಂತ್ರಣ ಹೇರುತ್ತಿಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ, ಅಸತ್ಯವಾದ ಅಥವಾ ಫೇಕ್ ನ್ಯೂಸ್‌ಗಳ ಮೇಲೂ ಕಡಿವಾಣ ಹಾಕುತ್ತಿಲ್ಲ. ಅದೇ ರೀತಿ ಭಾರತದ ಪ್ರಸ್ತುತ ಸರ್ಕಾರದ ವಿರುದ್ಧ ಧ್ವನಿ ಎತ್ತುವ ವಿಪಕ್ಷಗಳು ಮತ್ತು ನಾಯಕರ ಟ್ವಿಟ್ಟರ್ ಹ್ಯಾಂಡಲ್‌ಗಳ ಮೇಲೆ ನಿಯಂತ್ರಣವಿದೆ ಎಂದು ರಾಹುಲ್ ಈ ಹಿಂದೆ ಅಸಮಧಾನ ಹೊರಹಾಕಿದ್ದರು.