ಬಹುಭಾಷೆಗಳಲ್ಲಿ ನಟಿಸಿರುವ ಸಮಂತಾ ಅಂದರೆ ಎಲ್ಲರಿಗೂ ಇಷ್ಟವಾಗುವ ನಟಿ. ಸಖತ್ ಬೋಲ್ಡ್ ಹ್ಯಾಂಡ್ ಕ್ಯೂಟ್ ಆಗಿ ತೆರೆ ಮೇಲೆ ಆಗಿ ಕಾಣಿಸಿಕೊಳ್ಳುವ ನಟಿ ಸಮಂತಾ ತಮ್ಮ ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದನ್ನು ನೀಡಿದ್ದು, ಇದೀಗ ಅವರು ಮಯೋಸೈಟಿಸ್ ಎಂಬ ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಕಾಯಿಲೆ ಬಗ್ಗೆ ಸಮಂತಾ ಅವರೇ ಹೇಳಿಕೊಂಡಿದ್ದು, ನನಗೆ ಕೆಲವು ತಿಂಗಳ ಹಿಂದೆ ಮಯೋಸೈಟಿಸ್ ಎಂಬಂತಹ ಅಪರೂಪದ ಖಾಯಿಲೆ ಬಗ್ಗೆ ತಿಳಿಯಿತು. ಅದು ವಾಸಿಯಾದ ನಂತರ ಎಲ್ಲರೊಂದಿಗೆ ಹೇಳಬೇಕಂತ ಅನ್ಕೊಂಡಿದ್ದೆ. ಆದರೆ ಈ ಸಮಸ್ಯೆ ವಾಸಿಯಾಗಲು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಬಿಟ್ಟಿದೆ. ಆದರೆ ಶೀಘ್ರದಲ್ಲೇ ನಾನು ಗುಣಮುಖರಾಗುವ ಭರವಸೆ ವೈದ್ಯರು ನೀಡಿದ್ದಾರೆ ಎಂದಿದ್ದಾರೆ.

ನನ್ನ ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಇದ್ದವು. ಇದನ್ನು ನನ್ನಿಂದ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳೂ ಕೂಡ ಕಳೆದು ಹೋಗಿವೆ. ಈಗ ಈ ಸಮಸ್ಯೆಯಿಂದ ಬೇಗನೇ ಚೇತರಿಸಿಕೊಳ್ಳುತ್ತೇನೆ ಎಂದು ಅನಿಸುತ್ತದೆ. ನಾನು ನಿಮ್ಮನ್ನೆಲ್ಲರನ್ನು ಹೆಚ್ಚು ಪ್ರೀತಿಸುವೆ. ಸಧ್ಯಕ್ಕೆ ನನಗೆ ಬಂದಿರುವ ಕಾಯಿಲೆಯಿಂದ ಆಯಾಸ, ಸ್ನಾಯು ನೋವು, ಉಸಿರಾಟದ ಸಮಸ್ಯೆ, ತಿನ್ನಲು ಮತ್ತು ಕುಡಿಯಲು ತೊಂದರೆ ಆಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ನೋವು ಹಂಚಿಕೊಂಡಿದ್ದಾರೆ.

ಸಮಂತಾಗೆ ಧೈರ್ಯ ತುಂಬಿದ ಸಿನಿರಂಗ : ಕನ್ನಡ, ತೆಲುಗು, ತಮಿಳು ಹಾಗೂ ಇನ್ನಿತರೆ ಭಾಷೆಗಳಲ್ಲಿ ನಟಿಸಿರುವ ನಟಿ ಸಮಂತಾ ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಅನೇಕರು ಶೀಘ್ರ ಗುಣಮುಖರಾಗುವಂತೆ ಆಶಿಸಿದ್ದಾರೆ. ನಟ ಚಿರಂಜೀವಿ ಪತ್ರ ಬರೆದಿದ್ದು, ‘ನೀವು ಅದ್ಭುತವಾದ ಹುಡುಗಿ.. ನೀನು ಇದರಿಂದ ಆಚೆ ಬರುವೆ.. ನಿನಗೆ ಆ ಶಕ್ತಿ ಇದೆ..’ ಎಂದು ಹೇಳಿದ್ದಾರೆ. ಜೂನಿಯರ್ ಎನ್‌ಟಿಆರ್, ರಾಮ್ ಪೋತಿನೇನಿ, ಸಾಯಿ ಪಲ್ಲವಿ, ಅಡಿವಿ ಶೇಷ್, ಸಾಯೇಷಾ, ಸಂದೀಪ್ ಕಿಶನ್, ಸಾಯಿ ಧರಮ್ ತೇಜ್, ದುಲ್ಖಾರ್ ಸಲ್ಮಾನ್, ಸುಶಾಂತ್ ಸೇರಿದಂತೆ ಅನೇಕರು ಗುಣಮುಖರಾಗುವಂತೆ ಆಶಿಸಿದ್ದಾರೆ.

ಜೊತೆಗೆ ಸಮಂತಾ ಅವರ ಮಾಜಿ ಮಾವ, ನಟ ನಾಗಾರ್ಜುನ ಹಾಗೂ ಅವರ ಮಗ, ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ, ಇನ್ನೂ ಯಾವುದೇ ಮಾಹಿತಿ ಖಚಿತಪಡಿಸಿಲ್ಲ. ಅಕ್ಕಿನೇನಿ ಕುಟುಂಬದಿಂದಲೂ ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲ.
ಅಕ್ಟೋಬರ್ 27ರಂದು ಸಮಂತಾ ನಟನೆಯ ‘ಯಶೋದಾ’ ಚಿತ್ರದ 5 ಭಾಷೆಗಳ ಟ್ರೇಲರ್ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡದ ಅವತರಣಿಕೆಯನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಹಿಂದಿಯಲ್ಲಿ ವರುಣ್ ಧವನ್ ಬಿಡುಗಡೆ ಮಾಡಿದ್ದಾರೆ. ಹರಿ-ಹರೀಶ್ ಜಂಟಿಯಾಗಿ ನಿರ್ದೇಶಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾ ನವೆಂಬರ್ 11ಕ್ಕೆ ತೆರೆ ಕಾಣಲಿದೆ.