ಮುಂಬೈನಿಂದ ಬೆಳಗಾವಿ ಮೂಲಕ ಗೋವಾಕ್ಕೆ ತೆರಳುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸರಳತೆಗೆ ಮತ್ತೊಮ್ಮೆ ಜನರು ಬಹುಪರಾಕ್ ಎಂದಿದ್ದಾರೆ. ಅವರು, ಗೋವಾಕ್ಕೆ ಹೋಗುವ ದಾರಿಯಲ್ಲಿ ಬೆಳಗಾವಿಯ ಹೊರವಲಯದಲ್ಲಿ ಒಂದು ಚಿಕ್ಕ ಹೋಟೆಲ್‌ನಲ್ಲಿ ಒಂದು ಗ್ಲಾಸ್ ಚಹಾ ಮತ್ತು ರಸ್ಕ್ ತಿಂದಿದ್ದಾರೆ.
ಕುಂದಾನಗರಿ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ 4 (ಎ) ನಲ್ಲಿ ವೈಜು ನಿರ್ತೂರ್ಕರ್ ಎಂಬವರ ಟೀ ಸ್ಟಾಲ್ ಇದೆ. ಗೋವಾಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಸಚಿನ್ ತೆಂಡೂಲ್ಕರ್ ಅಲ್ಲಿ ಕಾರು ನಿಲ್ಲಿಸಿದ್ದಾರೆ. ಬಳಿಕ ಆ ಟೀ ಸ್ಟಾಲ್‌ನಲ್ಲಿ ಚಹಾ ಕುಡಿದಿದ್ದಾರೆ. ನಮ್ಮ ನಿಮ್ಮಂತೆ ಬೀದಿಬದಿಯ ಅಂಗಡಿಯಲ್ಲಿ ರಸ್ಕ್ ತಿಂದಿದ್ದಾರೆ.
ಈ ಸಮಯದಲ್ಲಿ ಸ್ಥಳೀಯರು ಇವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸ್ಥಳೀಯರೊಂದಿಗೆ ಸಚಿನ್ ತೆಂಡೂಲ್ಕರ್ ಆತ್ಮೀಯವಾಗಿ ಹರಟಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಕೂಡ ಸಚಿನ್ ಜತೆ ಮಾತನಾಡುತ್ತಿರುವ ದೃಶ್ಯವಿದೆ. “ಚಾಯ್, ರಸ್ಕ್ ತಿನ್ನುತ್ತಿದ್ದೇನೆʼʼ ಎಂದು ಅವರು ವಿಡಿಯೋದಲ್ಲಿ ಹೇಳುತ್ತಿದ್ದಾರೆ. “ಏನಂತಾರೆ ಇದಕ್ಕೆ, ರಸ್ಕ್ ತಿನ್ನುತ್ತಿದ್ದೇನೆ, ಹಾರ್ಟ್ ರೋಸ್ಟ್ ತಿನ್ನುತ್ತಿದ್ದೇನೆʼʼ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
“ನೀವು ತುಂಬಾ ಸರಳ ವ್ಯಕ್ತಿ. ನಿಮ್ಮ ಡೌನ್ ಟು ಅರ್ಥ್ ವ್ಯಕ್ತಿತ್ವಕ್ಕೆ ಶರಣುʼʼ ಎಂದು ಅಶ್ವಿನ್ ಎನ್ನುವವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. “ಎಲ್ಲಾದರೂ ನನಗೆ ಸಚಿನ್ ತೆಂಡೂಲ್ಕರ್ ಈ ರೀತಿ ಷೇಕ್‌ಹ್ಯಾಂಡ್ ನೀಡುತ್ತಿದ್ದರೆ ನಾನು ಅಲ್ಲೇ ಷಾಕ್‌ನಿಂದ ಕುಸಿದು ಬೀಳುತ್ತಿದ್ದೆʼʼ ಎಂದು ಆರ್ನಾಬ್ ರಾಯ್ ಕಾಮೆಂಟ್ ಮಾಡಿದ್ದಾರೆ. ಬಹುತೇಕರು “ಎಂತಹ ಹಂಬಲ್ ವ್ಯಕ್ತಿತ್ವʼʼ ಎಂದು ಕಾಮೆಂಟ್ ಮಾಡಿದ್ದಾರೆ.