ಬಾಗಲಕೋಟೆ : ಕಬ್ಬಿಗೆ ಸೂಕ್ತ ರೀತಿಯ ಖರೀದಿ ದರ ಘೋಷಿಸಬೇಕೆಂದು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಕಲ್ಲು ತೂರಾಟದಿಂದ ಬನಹಟ್ಟಿ ಸಿಪಿಐ ಈರಯ್ಯ ಮಠಪತಿ ಅವರ ಎದೆಗೆ ತಾಗಿದ್ದು, ಗಾಯಗೊಂಡು ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಹಕವಿ ಬನಹಟ್ಟಿ ತಾಲ್ಲೂಕಿನ ಸಮೀರವಾಡಿಯಲ್ಲಿರುವ ಸಕ್ಕರೆ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಾರ್ಖಾನೆಯ ಕಚೇರಿಗೆ ರೈತರು ಹತಾಠ್ ಆಗಿ ನುಗ್ಗಿ, ಕಾರ್ಖಾನೆ ಕಚೇರಿಯ ಕಿಟಕಿ ಗಾಜು ಧ್ವಂಸಗೊಳಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕಚೇರಿ ಒಳಗಿನಿಂದ ಕೆಲವರು ಕಲ್ಲು, ಬಾಟಲ್ ಗಳನ್ನು ಎಸೆದಿದ್ದರು. ಇದರಿಂದ ಈರಯ್ಯ ಮಠಪತಿಗೆ ಕಲ್ಲು ಎದೆಗೆ ಬಿದ್ದಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರತಿಭಟನೆ ವೇಳೆ ಕಬ್ಬಿಗೆ ಟನ್ ವೊಂದಕ್ಕೆ 2900 ರೂಪಾಯಿ ಘೋಷಿಸಬೇಕೆಂದು ಆಗ್ರಹಿಸಿದರು. ಕೂಡಲೇ ಕಾರ್ಖಾನೆಯ ಆಡಳಿತ ಮಂಡಳಿ ಸಭೆ ನಡೆಸಿ, ಆಡಳಿತ ಮಂಡಳಿ ಸಿಬ್ಬಂದಿ ಟನ್ ಗೆ 2900 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು. ಇದರಿಂದ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು.

ಸ್ಥಳಕ್ಕೆ ಎಸ್ ಪಿ ಜಯಪ್ರಕಾಶ್ ಅವರು ಭೇಟಿ ನೀಡಿದ್ದು, ರೈತರೊಬ್ಬರ ಎದೆಗೆ ಕಲ್ಲು ಬಿದ್ದಿದೆ, ಯಾವುದೇ ತೊಂದರೆಯಿಲ್ಲ ಅವರು ಸೇಫ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
