ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳ ಆರಂಭಕ್ಕಾಗಿ ದಿನಗಣನೆ ಶುರುವಾಗಿದ್ದು, ಭಾರತ, ನ್ಯೂಜಿ಼ಲೆಂಡ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಹಣಾಹಣಿಗೆ ಸಜ್ಜಾಗಿವೆ. ಈ ನಡುವೆ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ ಎಂದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.
ಕ್ರಿಕೆಟ್ ಫ್ಯಾನ್ಸ್‌ಗಳ ಜೊತೆಗೆ ಸೌತ್ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸಹ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಗಬೇಕೆಂಬ ಬಗ್ಗೆ ಶೇ.70ರಷ್ಟು ಫ್ಯಾನ್ಸ್‌ಗಳು ವೋಟ್ ಮಾಡಿದ್ದಾರೆ. ಹೀಗಾಗಿ ನಾನು ಸಹ ಭಾರತ ಹಾಗೂ ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿ ಆಗಲಿ ಎಂದು ವೋಟ್ ಮಾಡಿದ್ದು, ಈ ಎರಡು ತಂಡಗಳ ನಡುವಿನ ಪಂದ್ಯ ಅಭಿಮಾನಿಗಳಿಗೆ ರಸದೌತಣವಾಗಲಿದೆ ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿದೆ. ಭಾರತ ಹಾಗೂ ನ್ಯೂಜಿ಼ಲೆಂಡ್ ತಂಡಗಳು ಸೂಪರ್-12 ಹಂತದ ಅಗ್ರ ತಂಡಗಳಾಗಿ ಫೈನಲ್ ಪ್ರವೇಶ ಪಡೆದಿದ್ದರೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು 2ನೇ ತಂಡವಾಗಿ ಟೂರ್ನಿಯ ಸೆಮೀಸ್ ಹಂತಕ್ಕೆ ಲಗ್ಗೆಯಿಟ್ಟಿವೆ. ನ.9ರಂದು ಬುಧವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಹಣಾಹಣಿ ನಡೆಸಲಿವೆ. ನ.10ರಂದು ಗುರುವಾರ ನಡೆಯುವ ಎರಡನೇ ಸೆಮೀಸ್ ಕದನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎದುರಾಗಲಿವೆ.
ಭಾರತದ ಅಭ್ಯಾಸ ಆರಂಭ
ಇಂಗ್ಲೆಂಡ್ ವಿರುದ್ಧ ನಡೆಯುವ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಪಂದ್ಯದ ಸಲುವಾಗಿ ಈಗಾಗಲೇ ಅಡಿಲೇಡ್‌ಗೆ ಬಂದಿರುವ ಭಾರತೀಯ ಆಟಗಾರು ಮಂಗಳವಾರ ಬೆಳಗ್ಗೆ ಹಲವು ಗಂಟೆಗಳ ಕಾಲ ನೆಟ್ ಅಭ್ಯಾಸ ನಡೆಸಿದರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.
#t20 cricket world cup #India #Pakisthan #final match #fans are waiting #practice #TeamIndia