Search

Bengaluru Rain : ಜಿಟಿಜಿಟಿ ಮಳೆಯಿಂದ ಹೈರಾಣಾದ ಬೆಂಗಳೂರಿಗರು..! ಇನೆಷ್ಟು ದಿನ ಮುಂದುವರೆಯುತ್ತೆ ತುಂತುರು ಮಳೆ..!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ತುಂತುರು ಮಳೆ ಸುರಿಯುತ್ತಿದ್ದು, ಜಿಟಿಜಿಟಿ ಮಳೆ ಮತ್ತು ಚಳಿಗೆ ರಾಜ್ಯದ ಜನತೆ ಹೈರಾಣಾಗಿದ್ದಾರೆ.. ಕಳೆದ ಎರಡು – ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದರೂ, ನಿನ್ನೆ(ನ.23-ಬುಧವಾರ) ಸಂಜೆಯಿಂದ ಶುರುವಾಗಿರುವ ತುಂತುರು ಮಳೆ ಇದುವರೆಗೂ ನಿಲ್ಲುವ ಯಾವುದೇ ಮುನ್ಸೂಚನೆ  ನೀಡಿಲ್ಲ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ಹಾಗೂ ತಮಿಳುನಾಡು ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ, ಬೆಂಗಳೂರಿನಲ್ಲಿ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ(IMD) ತಿಳಿಸಿದೆ. ಮುಂದಿನ 3 ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಇಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಇಂದಿನಿಂದ 2 ದಿನ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಂದರೆ ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನ ಜನತೆ ಮಳೆಯ ಜೊತೆಗೆ ಚಳಿಯನ್ನೂ ಎದುರಿಸಬೇಕಿದೆ.

ಇಂದು ಬೆಳಗ್ಗೆ ಕಚೇರಿಗೆ ತೆರಳುವ ಉದ್ಯೋಗಿಗಳು, ಶಾಲಾ-ಕಾಲೇಜಿಗೆ ತೆರಳು ವಿದ್ಯಾರ್ಥಿಗಳು ತುತುಂತು ಮಳೆ ಮತ್ತು ಚಳಿಯಿಂದ ನಡುಗುತ್ತಲೇ ತಮ್ಮ ತಮ್ಮ ಸ್ಥಳಗಳಿಗೆ ತೆರಳುತ್ತಿರುವುದು ಕಂಡುಬಂದಿತು. ಬೆಳಗಿನ ಹೊತ್ತಿನಲ್ಲಂತೂ ಜನರು ಮಳೆ ಮತ್ತು ಚಳಿಯಿಂದ ನಡುಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.

ಬೆಂಗಳೂರು ಸಂಚಾರ ಪೊಲೀಸ್‌ ಆಯುಕ್ತರ ಟ್ವೀಟ್:‌

ಇನ್ನು ಬೆಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ತುಂತುರು ಮಳೆ ಬಗ್ಗೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಸಂಚಾರ ವಿಶೇಷ ಪೊಲೀಸ್ ಆಯುಕ್ತರಾದ ಎಂಎ ಸಲೀಂ ಟ್ವೀಟ್‌ ಮಾಡಿದ್ದಾರೆ. ”ಇಂದು ಕೂಡ ಭಾರೀ ತುಂತುರು ಮಳೆ ಮುಂದುವರೆಯುವ ಸಾಧ್ಯತೆ ಇದೆ. ದಯವಿಟ್ಟು ಎಚ್ಚರಿಕೆಯಿಂದ ಚಾಲನೆ ಮಾಡಿ. ಎಲ್ಲಾ ಪ್ರಯಾಣಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿ ”.. ಎಂದು ಎಂಎ ಸಲೀಮ್‌ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಇನ್ನು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಭಾರೀ ಮಳೆಯಿಂದಾಗಿ ಇಂದು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ತುಮಕೂರು, ಮಂಡ್ಯ, ರಾಮನಗರ, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದೂ ಹವಾಮಾನ ಇಲಾಖೆ ಅಂದಾಜಿಸಿದೆ.

More News

You cannot copy content of this page